ಚಾಂಪಿಯನ್ ಅಥ್ಲೀಟ್ ಈಗ ನರೇಗಾ ಕೂಲಿ

ಜೈಪುರ: ರಾಜಸ್ಥಾನದ ಅಥ್ಲೆಟಿಕ್ ರಂಗದಲ್ಲಿ ಮಿಂಚು ಮೂಡಿಸಿದ್ದ ಭಗವತಿ ಕುಮಾರಿ (23) ಎಂಬ ಅಥ್ಲೀಟ್ ಈಗ ಬಡತನದ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆ ಕೂಲಿಯಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಎಂಟು ವರ್ಷ ಹಿಂದೆ ಅಂತಾರಾಷ್ಟ್ರೀಯ ಅಥ್ಲೀಟ್ ಪಿ.ಟಿ.ಉಷಾ ಅವರನ್ನು ಭೇಟಿ ಮಾಡುವ ಅವಕಾಶ ಪಡೆದಿದ್ದ ಭಗವತಿ ಅಥ್ಲೆಟಿಕ್ ಕ್ಷೇತ್ರದಲ್ಲಿ ಮಹತ್ ಸಾಧನೆಯ ಕನಸು ಕಂಡಿದ್ದರು. ರಾಜಸ್ಥಾನವನ್ನು 19ರ ವಯೋಮಿತಿ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದ ಈ ಮೂರು ಬಾರಿಯ ರಾಜ್ಯಮಟ್ಟದ ಚಾಂಪಿಯನ್ ಪಾಲಿಗೆ ವಿಧಿ ಕ್ರೂರವಾಗಿದೆ.
ತಮ್ಮ ವೇಗ ಹಾಗೂ ಓಟದ ಬಗೆಗಿನ ಪ್ರೀತಿಯಿಂದಾಗಿ ರಾಜ್ಯದಲ್ಲಿ "ಭಾಗೊ" ಎಂದೇ ಕರೆಸಿಕೊಂಡಿದ್ದ ಭಗವತಿ ಪಾಲಿಗೆ ಈಗ ಅಥ್ಲೆಟಿಕ್ ತರಬೇತಿ ಇತಿಹಾಸ.
ಟ್ರ್ಯಾಕ್ ಸೂಟ್, ಷೂ ಧರಿಸುತ್ತಿದ್ದ ಭಗವತಿ ಈಗ ಮಾಸಲು ಬಟ್ಟೆ, ಸ್ಲಿಪ್ಪರ್ ಧರಿಸಿ ತನ್ನ ಅತ್ತಿಗೆ ಜತೆ ಶಿರೋಹಿ ಜಿಲ್ಲೆ ನಾಗನಿ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಾರೆ. ಎರಡು ಹೊತ್ತಿನ ಊಟಕ್ಕೂ ಕಷ್ಟ.
2006ರಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜೀವನಶ್ರೇಷ್ಠ ಸಾಧನೆ ಮಾಡಿದ್ದ ಭಗವತಿ 800 ಮೀಟರ್ ಓಟವನ್ನು 2 ನಿಮಿಷ 32 ಸೆಕೆಂಡ್‌ಗಳಲ್ಲಿ ಪೂರೈಸಿ, ಚಾಂಪಿಯನ್ ಆಗಿದ್ದರು.
ರಾಷ್ಟ್ರೀಯ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದ ಭಾಗೊ ಸರಣಿ ಆಘಾತಗಳಿಂದ ತತ್ತರಿಸಿದ್ದಾರೆ.
ಆರು ವರ್ಷದ ಹಿಂದೆ ಅಣ್ಣನ ಸಾವು, ಎರಡು ವರ್ಷ ಹಿಂದೆ ತಂದೆಯ ನಿಧನ, ಅದೇ ಸಂದರ್ಭ ಗಂಡನಿಂದ ವಿಚ್ಛೇದನ. ಇದೀಗ ತಾಯಿ ಹಾಗೂ ಅಣ್ಣ- ಅತ್ತಿಗೆ ಜತೆ ವಾಸವಾಗಿದ್ದು, ಅವರಿಗೆ ನೆರವಾಗುತ್ತಿದ್ದಾರೆ.
"ಹಲವು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಈಕೆಯ ಸ್ಥಿತಿ ನೋಡಿದಾಗ ಖೇದವಾಗುತ್ತದೆ. ಆಕೆ ನಮ್ಮ ಗ್ರಾಮದ ಕಣ್ಮಣಿ" ಎಂದು ಗ್ರಾಮದ ಸರಪಂಚರಾಗಿದ್ದ ನಾರಾಯಣಸಿಂಗ್ ಹೇಳುತ್ತಾರೆ.
ಸೊಸೈಟಿ ಫಾರ್ ಆಲ್‌ರೌಂಡ್ ಡೆವಲಪ್‌ಮೆಂಟ್ ಎಂಬ ಸ್ವಯಂಸೇವಾ ಸಂಸ್ಥೆ ಇದೀಗ ಈಕೆಯ ಪರವಾಗಿ ಧ್ವನಿ ಎತ್ತಲು ನಿರ್ಧರಿಸಿದೆ.







