ರಾಜ್ಯದಲ್ಲಿ 74.25 ಲಕ್ಷ ಮಕ್ಕಳಿಗೆ ಲಸಿಕೆಗೆ ಸಿದ್ಧತೆ: ಸಚಿವ ಖಾದರ್

ಮಂಗಳೂರು, ಜ.15: ರಾಜ್ಯದಲ್ಲಿ ಜನವರಿ 17ರಂದು ಮೊದಲನೆ ಸುತ್ತು ಹಾಗೂ ಫೆಬ್ರವರಿ 21ರಂದು ದ್ವಿತೀಯ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಲ್ಲಿ 5 ವರ್ಷದೊಳಗಿನ 74.25 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲು ವ್ಯಾಪಕ ಸಿದ್ಧತೆ ಮಾಡಲಾಗಿದೆ ಎಂದಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ರಾಜ್ಯದ ಹಳ್ಳಿ, ಪಟ್ಟಣ ಹಾಗೂ ನಗರಗಳು ಸೇರಿದಂತೆ 32617 ಬೂತ್‌ಗಳಲ್ಲಿ 51732 ತಂಡಗಳು, 103464 ಲಸಿಕಾ ಕಾರ್ಯಕರ್ತರು, 6522 ಮೇಲ್ವಿಚಾರಕರು, 1205 ಸಂಚಾರಿ ತಂಡಗಳು, 1736 ಟ್ರಾಸಿಟ್ ತಂಡಗಳು ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದರು.
ರಾಜ್ಯದಲ್ಲಿ ನಿರ್ಮಾಣ ಹಂತದ ಕಟ್ಟಡಗಳಲ್ಲಿರುವ ಕೂಲಿ ಕಾರ್ಮಿಕರು ಮತ್ತು ವಲಸಿಗರು ಸೇರಿದಂತೆ 29,000ಕ್ಕೂ ಅಧಿಕ ಅಪಾಯದಂಚಿನಲ್ಲಿರುವ ಕ್ಷೇತ್ರಗಳನ್ನು ಗುರುಇತಸಲಾಗಿದ್ದು, ಅಲ್ಲಿಯೂ ಮಕ್ಕಳಿಗೂ ಪೋಲಿಯೋ ಹನಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಬಸ್, ರೈಲ್ವೇ, ವಿಮಾನ ನಿಲ್ದಾಣಗಲಲ್ಲಿ ಟ್ರಾನಿಟ್ ತಂಡಗಳ ಮೂಲಕ ಪೋಲಿಯೋ ಲಸಿಕೆ ಹಾಕಲಾಗುವುದು. ಆ ದಿನಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಬೂತ್‌ಗಳಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಮುಂದಿನ ಮೂರು ದಿನಗಳಲ್ಲಿ ಸ್ವಯಂ ಸೇವಕರು ಮನೆಗಳಿಗೆ ಭೇಟಿ ನೀಡಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಲಸಿಕೆ ಪಡೆದಿರುವುದನ್ನು ಖಾತರಿ ಪಡಿಸಲಿದ್ದಾರೆ.
ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿದ್ದರೂ ಸಹ ಮತ್ತೆ ಈ ಸುತ್ತುಗಳಲ್ಲಿ ಪೋಲಿಯೋ ಹನಿ ಹಾಕುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವ ಯು.ಟಿ.ಖಾದರ್ ಖಾದರ್ ಮನವಿ ಮಾಡಿದರು.
ದ.ಕ. ಜಿಲ್ಲೆಯಲ್ಲಿ ಈ ಕಾರ್ಯಕ್ರಮದಡಿ 168947 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 921 ಲಸಿಕಾ ಬೂತ್‌ಗಳು, 3228 ಲಸಿಕೆದಾರರು, 192 ಮೇಲ್ವಿಚಾರಕರು, 28 ಟ್ರಾನ್ಸಿಟ್ ತಂಡ, 8 ಮೊಬೈಲ್ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ಅವರು ವಿವರ ನೀಡಿದರು.
ಗೋಷ್ಠಿಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ. ರಾಜೇಶ್ವರಿ ದೇವಿ ಉಪಸ್ಥಿತರಿದ್ದರು.








