ವಿಶ್ವದ ಪ್ರಪ್ರಥಮ ಪರಿಸರ ಸ್ನೇಹಿ ಕೋಡಿ ಮಸೀದಿ ಲೋಕಾರ್ಪಣೆ

ಕುಂದಾಪುರ, ಜ.15: ಕೋಡಿಯಲ್ಲಿ ಪುನರ್‌ನಿರ್ಮಿಸಲಾಗಿರುವ ಜಗತ್ತಿನ ಪ್ರಪ್ರಥಮ ಶೂನ್ಯ ವಿದ್ಯುತ್‌ನ ಪರಿಸರ ಸ್ನೇಹಿ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನೆ ಇಂದು ನಡೆಯಿತು.
ಬ್ಯಾರೀಸ್ ಗ್ರೂಪ್ ನಿರ್ಮಿಸಿರುವ ಈ ಹಸಿರು ಮಸೀದಿಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಹಾಗೂ ಲಕ್ನೋದ ದಾರುಲ್ ಉಲೂಮ್ ನದ್ವತುಲ್ ಉಲಮಾದ ಮುಖ್ಯಸ್ಥ ಹಝ್ರತ್ ಮೌಲಾನ ಸಯ್ಯದ್ ಮುಹಮ್ಮದ್ ರಾಬಿಯ ಹಸನಿ ನದ್ವಿ ಉದ್ಘಾಟಿಸಿ ದುವಾ ನೆರವೇರಿಸಿದರು.
ಬೆಂಗಳೂರು ದಾರುಲ್ ಉಲೂಮ್ ಸಬೀಲುರ್ ರಶಾದ್‌ನ ಪ್ರಾಂಶು ಪಾಲ ಮುಫ್ತಿ ಅಶ್ರಫ್ ಅಲಿ ಬಾಖವಿ ಮಾತನಾಡಿ, ಈ ಮಸೀದಿಯು ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಕೇಂದ್ರ ಆಗಬೇಕು. ಈ ಸುಂದರ ಮಸೀದಿಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಇಡೀ ಊರಿನವರ ಮೇಲೆ ಇದೆ. ಮಸೀದಿಯು ನಿರ್ಜನವಾಗಿರದೆ ಸದಾ ಸಕ್ರೀಯವಾಗಿರುವಂತೆ ಮಾಡ ಬೇಕು ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಮಸೀದಿ ಖತೀಬ್ ಇಸ್ಮಾಯಿಲ್ ಝುಹರಿ ಶುಭಾ ಹಾರೈಸಿದರು. ಈ ಸಂದರ್ಭದಲ್ಲಿ ಮಸೀದಿ ಕಟ್ಟಡದ ಆರ್ಕಿಟೆಕ್ಚರ್ ಸಂದೀಪ್ ಸಹಿತ ಮಸೀದಿ ನಿರ್ಮಾಣ ಕಾರ್ಯದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಸನ್ಮಾನಿಸ ಲಾಯಿತು. ಬ್ಯಾರೀಸ್ ಗ್ರೂಪ್‌ನ ಸಯ್ಯದ್ ಮುಹಮ್ಮದ್ ಬ್ಯಾರಿ, ಮಸೀದಿಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್, ಮಾಜಿ ಖತೀಬ್ ಇಸ್ಮಾಯಿಲ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.












