ರಾಷ್ಟ್ರೀಯ ಸಮಾವೇಶಕ್ಕೆ ಹರಿದು ಬರಲಿದೆ ನದಿ –ಜನ ಜಾಥಾ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಜನವರಿ,30-2016 ರಂದು ಮಂಗಳೂರಲ್ಲಿ ಹಮ್ಮಿಕೊಂಡಿರುವ ‘ ಸಹಬಾಳ್ವೆಯ ಸಾಗರ’ ರಾಷ್ಟ್ರೀಯ ಸಮ್ಮೇಳನಕ್ಕೆ ನಾಡಿನ ವಿವಿಧ ಭಾಗಗಳಿಂದ ಸಹಬಾಳ್ವೆಯ ಜನರು ನದಿ ಹೆಸರಿನ ಜಾಥಾದ ಮೂಲಕ ಬರಲಿದ್ದು, ಅದರ ತಯಾರಿಗಳು ಈಗಾಗಲೇ ಆರಂಭಗೊಂಡಿವೆ.
ನೇತ್ರಾವತಿ – ಮಲಪ್ರಭಾ ನದಿಗಳ ಹೆಸರಲ್ಲಿ ಬಸವಣ್ಣನ ಕೂಡಲ ಸಂಗಮದಿಂದ ಬಿಜಾಪುರ , ಬಾಗಲಕೋಟೆ , ಬಾದಾಮಿ ಭಾಗದ ಜನ ಜಾಥಾ ಹೊರಡಲಿದ್ದು, ಇದರ ನೇತೃತ್ವವನ್ನು ಹೋರಾಟಗಾರ ಲಕ್ಷ್ಮಣ್ ಮರಡಿತೋಟ ಮತ್ತು ಆ ಭಾಗದ ಸಂಗಾತಿಗಳು ವಹಿಸಿಕೊಳ್ಳಲಿದ್ದು, ಈ ಬಗ್ಗೆ ಸಭೆಗಳನ್ನು ನಡೆಸಲಾಗುತ್ತಿದೆ.
ಶರಾವತಿ ನದಿ ಹೆಸರಿನ ಜನ ಜಾಥಾವು ಶಿಶುನಾಳ ಶರೀಫರ ಕ್ಷೇತ್ರ ಶಿಶುನಾಳದಿಂದ ಹೊರಡಲಿದ್ದು ಅದರಲ್ಲಿ ದಾವಣಗೆರೆ – ಚಿತ್ರದುರ್ಗಾಜಿಲ್ಲೆಗಳ ಭಾಗದ ಜನರು ಸೇರಿಕೊಳ್ಳಲಿದ್ದು, ಅದರ ನೇತೃತ್ವವನ್ನು ನ್ಯಾಯವಾದಿ ಅನೀಸ್ ಪಾಶಾ – ಮೋಹನ್ ರಾಮಕೃಷ್ಣ ಮತ್ತಿತರ ಸಂಗಾತಿಗಳು ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಆ ಭಾಗದಲ್ಲಿ ಕರಪತ್ರ ಬಿಡುಗಡೆ – ಪ್ರಚಾರ ಸಭೆಗಳನ್ನು ನಡೆಸಲಾಗುತ್ತಿದೆ.
ಸೀತಾ – ಭದ್ರಾ ನದಿ ಹೆಸರಿನ ಜನ ಜಾಥಾವು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಆರಂಭಗೊಂಡ ಭಾವೈಕ್ಯ ಮತ್ತು ಸಹಬಾಳ್ವೆಯ ಸಂಸ್ಕೃತಿಯ ಪ್ರತೀಕವಾದ ಚಿಕ್ಕಮಗಳೂರಿನ ಬಾಬಾ ಬುಡಾನ್ ಗಿರಿಯಿಂದ ಹೊರಡಲಿದ್ದು, ಅದರ ನೇತೃತ್ವವನ್ನು ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಮತ್ತು ಶ್ರೀನಿವಾಸ್ ಹಾಗೂ ಆ ಭಾಗದ ಸಂಗಾತಿಗಳು ವಹಿಸಲಿದ್ದಾರೆ.
ಶಾಂಭವಿ – ಕಾವೇರಿ ನದಿಗಳ ಹೆಸರಿನ ಜನಜಾಥಾವು ಮೈಸೂರು ಹುಲಿ ಟಿಪ್ಪು ಸುಲ್ತಾನನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಿಂದ ಹೊರಡಲಿದೆ. ಮಂಡ್ಯ – ಮೈಸೂರು- ರಾಮನಗರ ಜಿಲ್ಲೆಗಳ ಜನರನ್ನು ಇದು ಒಳಗೊಳ್ಳಲಿದ್ದು, ಇದರ ನೇತೃತ್ವವನ್ನು ಹಿರಿಯರಾದ ಬರಹಗಾರ ಎಚ್.ಎಲ್.ಕೇಶವ ಮೂರ್ತಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಬಂಧಿಗೌಡರ ಪುತ್ರ ಡಾ.ಸುಜಯ ಕುಮಾರ್ ಮತ್ತು ಇತರ ಸಂಗಾತಿಗಳು ವಹಿಸಲಿದ್ದಾರೆ.
ಸೌಪರ್ಣಿಕಾ – ಶಾಲ್ಮಲಾ ನದಿ ಹೆಸರಿನ ಜನ ಜಾಥಾವು ಉತ್ತರಕನ್ನಡ ಜಿಲ್ಲೆಯ ಜನರನ್ನು ಒಳಗೊಂಡು ಅಂಕೋಲಾದಿಂದ ಹೊರಡಲಿದ್ದು, ಇದರ ನೇತೃತ್ವವನ್ನು ಕೆ.ರಮೇಶ್ ಅಂಕೋಲಾ ಮತ್ತಿತರ ಸಂಗಾತಿಗಳು ವಹಿಸಿಕೊಳ್ಳುವರು. ಇದರ ಬಗ್ಗೆ ಜನವರಿ,20-2016 ರಂದು ಅಂಕೋಲಾದಲ್ಲಿ ಚಿಂತನಾ ಸಭೆ ನಡೆಯಲಿದೆ.
ಕುಮಾರಧಾರಾ – ಫಲ್ಗುಣಿ ನದಿ ಹೆಸರಿನ ಜನ ಜಾಥಾವು ಚಿಕ್ಕಬಳ್ಳಾಪುರ – ಕೋಲಾರ ಭಾಗದ ಜನರನ್ನು ಒಳಗೊಂಡು ಚಿಕ್ಕಬಳ್ಳಾಪುರದ ಕೈವಾರ ತಾತಯ್ಯನ ಕ್ಷೇತ್ರದಿಂದ ಹೊರಡಲಿದ್ದು, ಇದರ ನೇತೃತ್ವವನ್ನು ವೇದಿಕೆಯ ರಾಜ್ಯ ಕಾರ್ಯದರ್ಶಿ – ಹಿರಿಯ ಹೋರಾಟಗಾರ ಎನ್.ವೆಂಕಟೇಶ್ – ಸಿ.ಜಿ.ಗಂಗಪ್ಪ ಮತ್ತಿತರ ಸಂಗಾತಿಗಳು ವಹಿಸಿಕೊಳ್ಳಲಿದ್ದಾರೆ.
ಕಾಳಿ – ಕೃಷ್ಣಾ ನದಿ ಜನ ಜಾಥಾವೂ ಹೈದರಬಾದ್ ಕರ್ನಾಟಕದ ಭಾಗದ ಜನರನ್ನು ಒಳಗೊಂಡು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಭಾವೈಕ್ಯದ ಕೇಂದ್ರವಾದ ತಿಂಥಿಣಿಯ ಮೌನೇಶ್ವರ ಕ್ಷೇತ್ರದಿಂದ ಹೊರಡಲಿದ್ದು, ಇದರ ನೇತೃತ್ವವನ್ನು ಹೋರಾಟಗಾರ ಮಲ್ಲಯ್ಯ ಕಮತಗಿ ಮತ್ತಿತರರು ವಹಿಸಿಕೊಳ್ಳಲಿದ್ದಾರೆ.
ಈ ಎಲ್ಲಾ ಜಾಥಾಗಳು ಜನವರಿ,29 ರ ರಾತ್ರಿಯ ಒಳಗೆ ಮಂಗಳೂರು ಸೇರಿಕೊಳ್ಳಲಿದ್ದು, ಕರಾವಳಿಯ ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಕುಂದಾಪುರದ ಗಡಿಭಾಗಗಳಲ್ಲಿ ಈ ಜಾಥಾಗಳನ್ನು ಸಮಾವೇಶದ ಸ್ವಾಗತ ಸಮಿತಿಯ ತಾಲೂಕು ಸಮಿತಿಯವರು ಸ್ವಾಗತಿಸಿ ಮುಂದಕ್ಕೆ ಬೀಳ್ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ರೀತಿಯಲ್ಲಿ ಜನವರಿ,30 ರ ಸಹಬಾಳ್ವೆಯ ಸಾಗರವೂ ನದಿ – ಜನ ಜಾಥಾದ ಮೂಲಕ ಸೇರಿಕೊಂಡು ಮಂಗಳೂರಿನ ಅರಬ್ಬೀ ಕಡಲಿಗೆ ಸೇರುವ ಸಾಂಕೇತಿಕ ನಡೆಯನ್ನು ತೋರ್ಪಡಿಸಿಕೊಳ್ಳುವ ಮೂಲಕ ಕರಾವಳಿಯಲ್ಲಿರುವ ಸಹಬಾಳ್ವೆಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರ್ಥಗರ್ಭಿತವಾಗಿ ನಡೆಯಲಿದೆ ಎಂದು ಹೇಳಲಾಗಿದೆ.







