ನೆರೆಯ ದೇಶವಾಗಿ ಭಾರತ ಬೇಡ: ಚೀನೀ ಸಮೀಕ್ಷೆ ಪಾಕಿಸ್ತಾನಕ್ಕೆ ಹೆಚ್ಚಿನ ಒಲವು
ಬೀಜಿಂಗ್, ಜ. 15: ಭಾರತ, ಜಪಾನ್ ಮತ್ತು ಚೀನಾದೊಂದಿಗೆ ಗಡಿ ವಿವಾದ ಹೊಂದಿರುವ ದೇಶಗಳನ್ನು ನೆರೆಕರೆ ಎಂಬುದಾಗಿ ಮಾನ್ಯ ಮಾಡಲು ಹೆಚ್ಚಿನ ಚೀನೀಯರು ಇಷ್ಟಪಡುತ್ತಿಲ್ಲ. ಬದಲಿಗೆ ಅವರು ಪಾಕಿಸ್ತಾನ ಮತ್ತು ನೇಪಾಳವನ್ನು ನೆರೆ ದೇಶಗಳಾಗಿ ಪರಿಗಣಿಸಲು ಇಚ್ಛಿಸುತ್ತಾರೆ. ಒಂದು ವೇಳೆ ಅವರಿಗೆ ‘ದೇವರ ಶಕ್ತಿ’ ಲಭಿಸಿ ಚೀನಾದ ನಕ್ಷೆಯನ್ನು ತಿದ್ದುವ ಅವಕಾಶ ಲಭಿಸಿದರೆ ಪಾಕಿಸ್ತಾನ ಮತ್ತು ನೇಪಾಳಗಳನ್ನು ಹತ್ತಿರದಲ್ಲಿಟ್ಟು ಉಳಿದ ದೇಶಗಳನ್ನು ದೂರಕ್ಕೆಸೆದು ಬಿಡುತ್ತಾರೆ!
ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ನ ಚೀನೀ ಆವೃತ್ತಿಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಈ ಚಿತ್ರಣ ಮೂಡಿಬಂದಿದೆ.
13,196 ಮಂದಿ ಜಪಾನನ್ನು ‘‘ಹೊರಗಟ್ಟಲು’’ ಬಯಸಿದ್ದಾರೆ. ಜಪಾನ್‌ಗೆ ವಿರುದ್ಧವಾಗಿ ಅತಿ ಹೆಚ್ಚಿನ ಮತಗಳು ಬಿದ್ದಿವೆ.
2 ಲಕ್ಷಕ್ಕೂ ಅಧಿಕ ಇಂಟರ್‌ನೆಟ್ ಬಳಕೆದಾರರು ಸಮೀಕ್ಷೆಯಲ್ಲಿ ಪಾಲ್ಗೊಂಡರು.
ದೂರ ತಳ್ಳಲ್ಪಟ್ಟ ಇತರ ದೇಶಗಳೆಂದರೆ ಫಿಲಿಪ್ಪೀನ್ಸ್ (11,671 ಮಂದಿ), ವಿಯೆಟ್ನಾಂ (11,620), ಉತ್ತರ ಕೊರಿಯ (11,024), ಭಾರತ (10,416), ಅಫ್ಘಾನಿಸ್ತಾನ (8,506) ಮತ್ತು ಇಂಡೋನೇಶ್ಯ (8,167).
ಅದೇ ವೇಳೆ, ಸರ್ವ ಋತುವಿನ ಮಿತ್ರ ಪಕ್ಷ ಎಂಬುದಾಗಿ ಚೀನೀ ನಾಯಕರು ಪರಿಗಣಿಸಿರುವ ಪಾಕಿಸ್ತಾನವನ್ನು ತಮ್ಮ ನೆರೆಯ ದೇಶ ಎಂಬುದಾಗಿ ಪರಿಗಣಿಸಲು 11,831 ಮಂದಿ ಬಯಸುತ್ತಾರೆ.
ಹೊಸ ನೆರೆಯ ದೇಶವಾಗಿ ಸ್ವೀಡನ್‌ಗೆ 9,776 ಮತಗಳು ಬಿದ್ದಿವೆ. ನ್ಯೂಝಿಲ್ಯಾಂಡ್, ಜರ್ಮನಿ, ಮಾಲ್ದೀವ್ಸ್, ಸಿಂಗಾಪುರ, ನಾರ್ವೆ ಮತ್ತು ಥಾಯ್ಲೆಂಡ್‌ಗಳನ್ನು ತಮ್ಮ ಹೊಸ ನೆರೆಯ ದೇಶಗಳಾಗಿ ಹೊಂದಲು ಚೀನೀಯರು ಆಸಕ್ತರಾಗಿದ್ದಾರೆ.







