ಲಂಕಾದಿಂದ 55 ಭಾರತೀಯ ಮೀನುಗಾರರ ಬಿಡುಗಡೆ
ಕೊಲಂಬೊ, ಜ. 15: ತಮಿಳರ ಸುಗ್ಗಿ ಹಬ್ಬ ಪೊಂಗಲ್‌ನ ಹಿನ್ನೆಲೆಯಲ್ಲಿ ಸದ್ಭಾವನಾ ದ್ಯೋತಕವಾಗಿ 55 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿರುವುದಾಗಿ ಶ್ರೀಲಂಕಾ ಸರಕಾರ ಶುಕ್ರವಾರ ಹೇಳಿದೆ.
ಶ್ರೀಲಂಕಾಗೆ ಸೇರಿದ ಜಲಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಶ್ರೀಲಂಕಾ ಅಧಿಕಾರಿಗಳು ಈ ಮೀನುಗಾರರನ್ನು ಬಂಧಿಸಿದ್ದರು ಎಂದು ಮೀನುಗಾರಿಕೆ ಮತ್ತು ಜಲ ಸಂಪನ್ಮೂಲಗಳ ಸಚಿವಾಲಯದ ಅಧಿಕಾರಿಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ಶ್ರೀಲಂಕಾದ ಸುಪರ್ದಿಯಲ್ಲಿ ಇನ್ನೂ 104 ಮೀನುಗಾರರಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗುವುದು.
ಶ್ರೀಲಂಕಾದ ಜಲಪ್ರದೇಶದಲ್ಲಿ ಭಾರತೀಯ ಮೀನುಗಾರರು ಅಕ್ರಮ ವಿಧಾನಗಳ ಮೂಲಕ ಮೀನುಗಾರಿಕೆ ನಡೆಸುತ್ತಿರುವುದರಿಂದ ದೇಶದ ಉತ್ತರ ಭಾಗದ ಮೀನುಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ ಎಂದು ಶ್ರೀಲಂಕಾದ ಮೀನುಗಾರಿಕೆ ಮತ್ತು ಜಲ ಸಂಪನ್ಮೂಲಗಳ ಸಚಿವ ಮಹೀಂದ ಅಮರವೀರ ಇತ್ತೀಚೆಗೆ ಹೇಳಿದ್ದರು.
Next Story





