ಮೂಡುಬಿದಿರೆ : ಅಕ್ರಮ ಗೋಸಾಗಾಟಕ್ಕೆ ಬಳಕೆಯಾಗುತ್ತಿದ್ದ ಸ್ಪಾರ್ಪಿಯೊ ವಾಹನ ವಶ - ಮೂವರು ಪರಾರಿ
ಮೂಡುಬಿದಿರೆ:ಕಲ್ಲಮುಂಡ್ಕೂರು ಬಳಿ ಶುಕ್ರವಾರ ಮುಂಜಾನೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಗೋಸಾಗಾಟಕ್ಕೆ ಬಳಕೆಯಾಗುತ್ತಿದ್ದ ಸ್ಪಾರ್ಪಿಯೊ ವಾಹನವನ್ನು ವಶಪಡಿಸಿಕೊಂಡಿದ್ದು ವಾಹನದಲ್ಲಿ ಮೂವರು ಪರಾರಿಯಾಗಿದ್ದಾರೆ.
ಕಲ್ಲಮುಂಡ್ಕೂರು ಪರಿಸರದಲ್ಲಿ ದನಕಳ್ಳತನ ಹೆಚ್ಚುತ್ತಿರುವುದರಿಂದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಲ್ಲಮುಂಡ್ಕೂರಿನಲ್ಲಿ ಚೆಕ್ ಪಾಯಿಂಟ್ ತೆರೆದು ರಾತ್ರಿ ಗಸ್ತು ಆರಂಭಿಸಿದ್ದರು. ಶುಕ್ರವಾರ ಮುಂಜಾನೆ ಸುಮಾರು 5 ಗಂಟೆಗೆ ಮೂಡುಬಿದಿರೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೊ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿದಾಗ ಚಾಲಕ ಮತ್ತು ಇತರ ಇಬ್ಬರು ವಾಹನ ನಿಲ್ಲಿಸಿ ಪರಾರಿಯಾದರೆನ್ನಲಾಗಿದೆ. ಸ್ಪಾರ್ಪಿಯೊ ವಾಹನದ ನೋಂದಾಣಿ ಸಂಖ್ಯೆ ಕೆ.ಎ 36 ಎಂ 3995 ಎಂದಾಗಿದ್ದು ಅದರಲ್ಲಿದ್ದ ಮೂವರ ಪೈಕಿ ಓರ್ವನನ್ನು ಸುರತ್ಕಲ್ ಸಮೀಪದ ಕಳವಾರಿನ ಅಬ್ದುಲ್ ಖಾದರ್ ಮತ್ತು ತೋಡಾರಿನ ಶರೀಪ್ ಎಂದು ಪೊಲೀಸರು ಗುರುತು ಹಚ್ಚಿದ್ದಾರೆ
ವಶಪಡಿಸಿಕೊಂಡ ವಾಹನದ ಕೆಲವು ಸೀಟುಗಳನ್ನು ತೆಗೆದು ದನಗಳನ್ನು ಕೂಡಿಹಾಕಲು ಅನುಕೂಲ ಮಾಡಿಕೊಳ್ಳಲಾಗಿದೆ. ವಾಹನದೊಳಗೆ ಸೆಗಣಿ ಮತ್ತು ಲಿಂಬೆ ಹುಳಿ ಇತ್ತೆನ್ನಲಾಗಿದೆ. ಮೂಡುಬಿದಿರೆ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ





