ಮೊದಲ ಟ್ವೆಂಟಿ-20: ಪಾಕಿಸ್ತಾನ ಶುಭಾರಂಭ ಅಫ್ರಿದಿ ಆಲ್‌ರೌಂಡ್ ಆಟ

ಆಕ್ಲೆಂಡ್, ಜ.15: ನಾಯಕ ಶಾಹಿದ್ ಅಫ್ರಿದಿ ಅವರ ಆಲ್‌ರೌಂಡ್ ಆಟ ಹಾಗೂ ಆರಂಭಿಕ ದಾಂಡಿಗ ಮುಹಮ್ಮದ್ ಹಫೀಝ್ ಅರ್ಧಶತಕದ ಕೊಡುಗೆಯ ನೆರವಿನಿಂದ ಪಾಕಿಸ್ತಾನ ತಂಡ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 16 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಪಾಕ್ ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಹಫೀಝ್(61 ರನ್, 47 ಎಸೆತ, 8 ಬೌಂಡರಿ, 2 ಸಿಕ್ಸರ್) ಸಾಹಸದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು.
ಗೆಲ್ಲಲು ಕಠಿಣ ಸವಾಲು ಪಡೆದ ನ್ಯೂಝಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್(70ರನ್, 60 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಮುನ್ರೊ(56) ಪ್ರಯತ್ನದ ಹೊರತಾಗಿಯೂ 20 ಓವರ್‌ಗಳಲ್ಲಿ 155 ರನ್‌ಗೆ ಆಲೌಟಾಯಿತು.
ಪಾಕಿಸ್ತಾನದ ಪರ ನಾಯಕ ಅಫ್ರಿದಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರು. ಅಫ್ರಿದಿ 23 ರನ್ ಗಳಿಸಿದ್ದಲ್ಲದೆ, 26 ರನ್‌ಗೆ 2 ವಿಕೆಟ್ ಕಬಳಿಸಿದರು. ಮೂರು ಕ್ಯಾಚ್‌ಗಳನ್ನು ಪಡೆದು, ಕಿವೀಸ್‌ನ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್‌ರನ್ನು ರನೌಟ್ ಮಾಡಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ವೇಗದ ಬೌಲರ್‌ಗಳಾದ ವಹಾಬ್ ರಿಯಾಝ್(3-34) ಹಾಗೂ ಉಮರ್ ಗುಲ್(2-38) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಐದು ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿರುವ ವೇಗದ ಬೌಲರ್ ಮುಹಮ್ಮದ್ ಆಮಿರ್ ನ್ಯೂಝಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಆಡುವ ಅವಕಾಶ ಪಡೆದರು. 4 ಓವರ್‌ನಲ್ಲಿ 31 ರನ್ ನೀಡಿ 1 ವಿಕೆಟ್ ಕಬಳಿಸಿದರು.
ಗೆಲ್ಲಲು ಸ್ಪರ್ಧಾತ್ಮಕ ಮೊತ್ತ ಪಡೆದ ಕಿವೀಸ್ 2ನೆ ಓವರ್‌ನಲ್ಲಿ ಆರಂಭಿಕ ಗಪ್ಟಿಲ್(4) ವಿಕೆಟ್ ಕಳೆದುಕೊಂಡಿತು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್(70 ರನ್) ದಾಖಲಿಸಿದ ವಿಲಿಯಮ್ಸನ್ ಅವರು ಕಾಲಿನ್ ಮುನ್ರೊರೊಂದಿಗೆ (56) ಎರಡನೆ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿದರು. ಆದರೆ, ಮುನ್ರೊ ಔಟಾದ ತಕ್ಷಣ ಕಿವೀಸ್ ಕುಸಿತದ ಹಾದಿ ಹಿಡಿಯಿತು. ವಿಲಿಯಮ್ಸನ್ ಕೊನೆಯ ಓವರ್ ತನಕ ಕ್ರೀಸ್‌ನಲ್ಲಿದ್ದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಆಮಿರ್ ಯಶಸ್ವಿ ಪುನರಾಗಮನ
2010ರಲ್ಲಿ ಇಂಗ್ಲೆಂಡ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಆಮಿರ್ ಐದು ವರ್ಷಗಳ ಕಾಲ ನಿಷೇಧ ಎದುರಿಸಿದ್ದರು. ಆರು ತಿಂಗಳ ಕಾಲ ಇಂಗ್ಲೆಂಡ್‌ನಲ್ಲಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು.
ಕಳೆದ ಸೆಪ್ಟಂಬರ್‌ನಲ್ಲಿ ಆಮಿರ್ ನಿಷೇಧದ ಅವಧಿ ಅಂತ್ಯಗೊಂಡಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಫಾರ್ಮ್‌ಗೆ ಮರಳಿದ್ದ ಆಮಿರ್ ಸಹ ಆಟಗಾರರ ಆಕ್ಷೇಪದ ನಡುವೆಯೂ ನ್ಯೂಝಿಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದರು.
23ರ ಹರೆಯದ ಆಮಿರ್ ಆಕ್ಲಂಡ್‌ನ ಈಡನ್‌ಪಾರ್ಕ್‌ನಲ್ಲಿ ಕಿವೀಸ್‌ನ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯವನ್ನು ಆಡುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಆಮಿರ್‌ರ ಮೊದಲ ಎಸೆತ ವೈಡ್ ಆಗಿತ್ತು. ಆ ನಂತರ ಬಿಗಿಯಾದ ಬೌಲಿಂಗ್ ಮಾಡಿದ ಅವರು ಗಂಟೆಗೆ 135 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದರು. ಆಮಿರ್ ಬೌಲಿಂಗ್‌ನಲ್ಲಿ ಪಾಕ್ ಫೀಲ್ಡರ್‌ಗಳು ಎರಡು ಕ್ಯಾಚ್ ಕೈಚೆಲ್ಲಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 20 ಓವರ್‌ಗಳಲ್ಲಿ 171/8
(ಮುಹಮ್ಮದ್ ಹಫೀಝ್ 61, ಉಮರ್ ಅಕ್ಮಲ್ 24, ಅಫ್ರಿದಿ 23, ಮಿಲ್ನೆ 4-37, ಸ್ಯಾಂಟ್ನೆರ್ 2-14)
ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 155 ರನ್‌ಗೆ ಆಲೌಟ್
(ವಿಲಿಯಮ್ಸನ್ 70, ಕಾಲಿನ್ ಮುನ್ರೊ 56, ವಹಾಬ್ ರಿಯಾಝ್ 3-34, ಅಫ್ರಿದಿ 2-26, ಉಮರ್ ಗುಲ್ 2-38)
ಪಂದ್ಯಶ್ರೇಷ್ಠ: ಶಾಹಿದ್ ಅಫ್ರಿದಿ.







