ಇಂಡೋನೇಶ್ಯ: ಓರ್ವ ಶಂಕಿತನ ಹತ್ಯೆ, 2 ಸೆರೆ
ಜಕಾರ್ತ, ಜ. 15: ಜಕಾರ್ತದಲ್ಲಿ ಐಸಿಸ್ ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ ಒಂದು ದಿನದ ಬಳಿಕ,ಇಂಡೋನೇಶ್ಯದ ಪೊಲೀಸರು ದೇಶಾದ್ಯಂತ ಕಾರ್ಯಾ ಚರಣೆ ನಡೆಸಿದ್ದು ಓರ್ವ ಶಂಕಿತ ಭಯೋತ್ಪಾದಕನನ್ನು ಕೊಂದಿದ್ದಾರೆ ಹಾಗೂ ಇಬ್ಬರನ್ನು ಬಂಧಿಸಿದ್ದಾರೆ.
ಗುರುವಾರ ಭಯೋತ್ಪಾದಕರು ನಡೆಸಿದ ಸರಣಿ ಬಾಂಬ್ ಸ್ಫೋಟಗಳು ಮತ್ತು ಗುಂಡಿನ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಐವರು ಭಯೋತ್ಪಾದಕರು.
ಸೆಂಟ್ರಲ್ ಸುಲವೆಸಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಶಂಕಿತ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಕೊಂದಿವೆ. ಅದೇ ವೇಳೆ, ಪಶ್ಚಿಮ ಜಾವದ ಸೈರಬಾನ್ ನಗರದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.
‘ಎಬೋಲ ಮುಕ್ತ’ ಘೋಷಣೆಯ ಮರುದಿನ ಸೋಂಕು ಪತ್ತೆ
ಫ್ರೀಟೌನ್ (ಸಿಯರಾ ಲಿಯೋನ್), ಜ. 15: ಪಶ್ಚಿಮ ಆಫ್ರಿಕ ಎಬೋಲ ಮುಕ್ತವಾಗಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಒಂದು ದಿನದ ಬಳಿಕ, ಸಿಯರಾ ಲಿಯೋನ್‌ನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರಲ್ಲಿ ರೋಗದ ಸೋಂಕಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು.
ಸಿಯರಾ ಲಿಯೋನ್‌ನ ಉತ್ತರ ಭಾಗದಲ್ಲಿ ಈ ತಿಂಗಳ ಆದಿ ಭಾಗದಲ್ಲಿ ಮೃತಪಟ್ಟ 22 ವರ್ಷದ ಯುವತಿಯೊಬ್ಬರಲ್ಲಿ ಎಬೋಲದ ಸೋಂಕಿರುವುದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭದ್ರತಾ ಕಚೇರಿಯ ವಕ್ತಾರರೋರ್ವರು ಸ್ಥಳೀಯ ಆಕಾಶವಾಣಿಯೊಂದಕ್ಕೆ ತಿಳಿಸಿದರು. ಅಧಿಕಾರಿಗಳು ಮಹಿಳೆಯ ಊರಿಗೆ ತನಿಖಾ ತಂಡಗಳನ್ನು ಕಳುಹಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಗುರುವಾರವಷ್ಟೇ ಪಶ್ಚಿಮ ಆಫ್ರಿಕ ಎಬೋಲ ಮುಕ್ತವಾಗಿದೆ ಎಂಬುದಾಗಿ ಘೋಷಿಸಿ ರುವುದನ್ನು ಸ್ಮರಿಸಬಹುದಾಗಿದೆ.





