3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಟೆಕ್ಕಿ ಪಾಕ್ ಸೇನೆ ವಶದಲ್ಲಿ
ಮುಂಬೈ, ಜ.15: ಮೂರು ವರ್ಷಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ಟೆಕ್ಕಿ ಹಮೀದ್ ನೆಹಾಲ್ ಅನ್ಸಾರಿ ಅವರ ಪೋಷಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ನಾಪತ್ತೆಯಾದ ಯುವಕ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾನೆ ಎಂದು ದೃಢಪಟ್ಟಿದೆ.
ಮೂರು ವರ್ಷಗಳ ಹಿಂದೆ ತನ್ನ ಇಂಟರ್ನೆಟ್ ಗೆಳತಿಯನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿ ಕಣ್ಮರೆಯಾಗಿದ್ದ ಅನ್ಸಾರಿ, ಇದೀಗ ಸೇನಾ ಕಸ್ಟಡಿಯಲ್ಲಿದ್ದು, ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಪೇಶಾವರ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಉಪ ಅಟಾರ್ನಿ ಜನರಲ್ ಮುಸ್ರತುಲ್ಲಾ ಅವರು ರಕ್ಷಣಾ ಸಚಿವಾಲ ಯದ ಉತ್ತರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದು, ನೆಹಾಲ್ ಹಮೀದ್ ಅನ್ಸಾರಿಯವರನ್ನು ಸೇನೆ ವಶಕ್ಕೆ ಪಡೆದಿದ್ದು, ಮಿಲಿಟರಿ ಕೋರ್ಟ್‌ನಲ್ಲಿ ವಿಚಾರಣೆಗೆ ಗುರಿಪಡಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಉದ್ಯೋಗ ಅರಸಿ ಅಫ್ಘಾನಿಸ್ತಾನಕ್ಕೆ ತೆರಳಿದ್ದ ಅನ್ಸಾರಿ 2012ರ ನವೆಂಬರ್‌ನಲ್ಲಿ ವಾಪಸಾಗಿದ್ದರು ಎಂದು ಅನ್ಸಾರಿಯವರ ತಾಯಿ ಪೌಝಿಯಾ ಅವರ ಪರ ವಕೀಲ ಖ್ವಾಜಿ ಮಹಮ್ಮದ್ ಅನ್ವರ್ ನ್ಯಾಯಾಯಲಕ್ಕೆ ತಿಳಿಸಿದರು. ಆತನಿಗೆ ಖೋಹತ್ ಮಹಿಳೆಯ ಸ್ನೇಹ ಸಂಬಂಧ ಸಾಮಾಜಿಕ ಜಾಲತಾಣದ ಮೂಲಕ ಎಳೆದಿತ್ತು. ಈ ಹಿನ್ನೆಲೆಯಲ್ಲಿ ಅಪ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಬಂದಿದ್ದಾನೆ ಎಂದು ವಿವರಿಸಿದರು.
ಖೋಹತ್‌ನ ಹೊಟೇಲ್‌ನಲ್ಲಿ ವಾಸವಾಗಿದ್ದ ಈತನನ್ನು ಗುಪ್ತಚರ ದಳದ ಸಹಾಯದಿಂದ ಪೊಲೀಸರು 2012ರ ನವೆಂಬರ್ 12ರಂದು ಬಂಧಿಸಿದ್ದರು. ಗುಪ್ತಚರ ದಳದವರು ಈತನನ್ನು ಹೊಟೇಲ್‌ನಿಂದ ಬಂಧಿಸಿದರು. ಆ ಬಳಿಕ ಆತನ ಇರುವಿಕೆ ಬಗ್ಗೆ ಕುಟುಂಬ ಅಥವಾ ಸ್ನೇಹಿತರಿಗೆ ಯಾವ ಮಾಹಿತಿಯೂ ಇಲ್ಲ ಎಂದು ಅನ್ವರ್ ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ. ಪೊಲೀಸರ ತಪಾಸಣೆ ವರದಿಯ ಪ್ರಕಾರ, ಅನ್ಸಾರಿಯವರನ್ನು ಗುಪ್ತಚರ ದಳದವರು ಬಂಧಿಸಿದ್ದರು. ಅನ್ಸಾರಿ ನಾಪತ್ತೆಯಾದ ಬಳಿಕ ಆತನ ತಾಯಿ ಮುಂಬೈ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರು ನಗರದಲ್ಲಿರುವ ಅಪ್ಘಾನ್ ರಾಯಭಾರ ಕಚೇರಿಯನ್ನೂ ಸಂಪರ್ಕಿಸಿದ್ದರು. ಅರ್ಜಿದಾರರು ಈ ಬಗ್ಗೆ ಇಸ್ಲಾಮಾಮಾದ್ ಸುಪ್ರೀಂಕೋರ್ಟ್‌ನ ಮಾನವ ಹಕ್ಕು ವಿಭಾಗಕ್ಕೆ ಅರ್ಜಿ ರವಾನಿಸಿದರು. ಇದು ಅರ್ಜಿಯನ್ನು ಕಾನೂನು ಜಾರಿ ಕಣ್ಮರೆ ಕುರಿತ ತನಿಖಾ ಆಯೋಗಕ್ಕೆ 2014ರ ಮಾರ್ಚ್‌ನಲ್ಲಿ ನೀಡಿತು. ಈ ಹಿನ್ನೆಲೆಯಲ್ಲಿ, ಅನ್ಸಾರಿ ಪತ್ತೆಗೆ ಜಂಟಿ ತನಿಖಾ ತಂಡ ನೇಮಿಸುವಂತೆ ಖೈಬರ್-ಪಖ್ತುಂಕ್ವಾ ಗೃಹ ಹಾಗೂ ಬುಡಕಟ್ಟು ವ್ಯವಹಾರಗಳ ಇಲಾಖೆಗೆ 2014ರ ಎಪ್ರಿಲ್‌ನಲ್ಲಿ ಆಯೋಗ ಸೂಚನೆ ನೀಡಿತು. ಈ ಹಿನ್ನೆಲೆಯಲ್ಲಿ ಅನ್ಸಾರಿ ನಾಪತ್ತೆ ಬಗ್ಗೆ ಕರಾಕ್ ಜಿಲ್ಲೆಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು ಎಂದು ವರದಿ ವಿವರಿಸಿದೆ.
ಹಮೀದ್ ತಾಯಿಯ ಪ್ರಕಾರ, ಆತ ಕಾಬೂಲ್‌ಗೆ ಉದ್ಯೋಗ ಅರಸಿ ಹೋಗಿದ್ದ. ಸುದೀರ್ಘ ಹೋರಾಟದ ಬಳಿಕ ಆತ ಸರಕಾರದ ಸುಪರ್ದಿಯಲ್ಲಿ ಸುರಕ್ಷಿತವಾಗಿದ್ದಾನೆ ಎನ್ನುವುದು ನಮಗೆ ತಿಳಿದುಬಂದಿದೆ. ಆತ ಚೆನ್ನಾಗಿದ್ದಾನೆ ಎನ್ನುವುದು ಸಂತೋಷ. ಆತ ಪ್ರತಿಭಾವಂತ ಹಾಗೂ ಆತನ ಪ್ರತಿಭೆಗೆ ತಕ್ಕ ಉದ್ಯೋಗ ಸಿಕ್ಕಿರಲಿಲ್ಲ. ಆತನಿಗೆ ಉದ್ಯೋಗದಲ್ಲಿ ತೃಪ್ತಿ ಇರಲಿಲ್ಲ ಎಂದು ಎನ್‌ಐಗೆ ಪೌಝಿಯಾ ವಿವರಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ವ್ಯವಸ್ಥಾಪಕ ಹುದ್ದೆ ಖಾಲಿ ಇದೆ ಎನ್ನುವುದು ಆತನಿಗೆ ಗೊತ್ತಾಯಿತು. ಕಾಬೂಲ್‌ಗೆ ಹೋಗಿ 10 ದಿನ ನಿರಂತರ ಸಂಪರ್ಕದಲ್ಲಿದ್ದ. ಮುಂದೆ ಸಂಪರ್ಕ ಕಡಿದು ಹೋಯಿತು. ಈ ಬಗ್ಗೆ ಅಫ್ಘಾನಿಸ್ತಾನ ರಾಜಭಾರ ಕಚೇರಿಯಲ್ಲೂ ವಿಚಾರಿಸಿದರು. ಆಗ ಪಾಕಿಸ್ತಾನದಲ್ಲಿ ಕಿರುಕುಳ ಅನುಭವಿಸುತ್ತಿದ್ದ ಬುಡಕಟ್ಟು ಯುವತಿಗೆ ಸಹಾಯ ಮಾಡಲು ಆತ ಪ್ರಯತ್ನಿಸಿದ್ದ ಎನ್ನುವುದು ಆಗ ಗೊತ್ತಾಯಿತು. ಆಕೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹತ್ತಿರದ ಇತರ ಕೆಲ ಸ್ನೇಹಿತರನ್ನು ಸಂಪರ್ಕಿಸಿದ. ಆಕೆ ಬುಡಕಟ್ಟು ಜನಾಂಗದವಳಾಗಿದ್ದರಿಂದ ಯಾರು ಕೂಡಾ ಇದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸ್ನೇಹಿತರು ತಿಳಿಸಿದರು
ಆತನ ಉದ್ದೇಶ ಒಳ್ಳೆಯದಿದ್ದರೂ, ಇದು ಒಳ್ಳೆಯ ನಡೆ ಅಲ್ಲ. ಆತ ಜೀವಂತ ಇದ್ದಾನೆಯೇ ಅಥವಾ ಮೃತಪಟ್ಟಿದ್ದಾನೆಯೇ ಎನ್ನುವುದು ನಮಗೆ ಕಳವಳವಾಗಿತ್ತು. ಆತ ಸುರಕ್ಷಿತವಾಗಿದ್ದಾನೆ ಎಂದು ನಿನ್ನೆ ತಿಳಿಯಿತು ಎಂದು ಅವರು ಹೇಳಿದ್ದಾರೆ. ಮಗನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತ ಸರಕಾರ ನಡೆಸಿದ ಪ್ರಯತ್ನಗಳಿಗೆ ಕೃತಜ್ಞತೆ ಹೇಳಿದ್ದು, ಭಾರತ ಸರಕಾರ ಬಹಳಷ್ಟು ಬೆಂಬಲ ನೀಡಿದೆ. ಈ ಸಂಬಂಧ ಪಾಕಿಸ್ತಾನದ ಹೈಕಮಿಷನ್‌ಗೆ ಬರೆದ ಹಲವು ಪತ್ರಗಳನ್ನು ತೋರಿಸಿದೆ ಎಂದು ಪೌಝಿಯಾ ಹೇಳಿದರು.
ಆತ ಮಿಲಿಟರಿ ಕಸ್ಟಡಿಯಲ್ಲಿದ್ದು, ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ ಎಂದು ಸರಕಾರ ಹೇಳಿಕೆ ನೀಡಿದ ಬಳಿಕ ಈ ಅರ್ಜಿಯನ್ನು ಪೇಶಾವರ ಹೈಕೋರ್ಟ್‌ನ ವಿಭಾಗೀಯ ಪೀಠ ವಿಲೇವಾರಿ ಮಾಡಿದೆ ಎಂದು ತಿಳಿದುಬಂದಿದೆ.





