ಸುನಂದಾ ಪುಷ್ಕರ್ ಸಾವು: ವರದಿ ಪಡೆದ ಪೊಲೀಸರು

ಹೊಸದಿಲ್ಲಿ, ಜ.15: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ, ದಿಲ್ಲಿ ಪೊಲೀಸರು ಆಕೆಯ ಒಳಾಂಗಗಳ ಮಾದರಿ ಬಗ್ಗೆ ನೀಡಿದ್ದ ಎಫ್‌ಬಿಐ ಲ್ಯಾಬ್ ವರದಿಯ ಬಗ್ಗೆ ವೈದ್ಯಕೀಯ ಮಂಡಳಿಯ ಸಲಹೆ ಪಡೆದಿದ್ದಾರೆ.
ಈ ವಿಷಯವನ್ನು ದಿಲ್ಲಿ ಪೊಲೀಸ್ ಕಮಿಷನರ್ ಎಸ್.ಎಸ್.ಬಸ್ಸಿ ಟ್ವೀಟ್ ಮಾಡಿದ್ದಾರೆ. ಇದರ ಪ್ರಗತಿ ಬಗ್ಗೆ ವಿಶೇಷ ಪೊಲೀಸ್ ಕಮಿಷನರ್ ದೀಪಕ್ ಮಿಶ್ರಾ ಪರಿಶೀಲನೆ ನಡೆಸಿದ್ದಾಗಿ ಬಸ್ಸಿ ಹೇಳಿದ್ದಾರೆ.
2014ರ ಜನವರಿಯಲ್ಲಿ ಪಂಚತಾರಾ ಹೊಟೇಲ್‌ನ ಸೂಟ್‌ನಲ್ಲಿ ಸುನಂದಾ ಮೃತದೇಹ ಪತ್ತೆಯಾಗಿತ್ತು. ಪಾಕಿಸ್ತಾನ ಮೂಲದ ಪತ್ರಕರ್ತೆ ಮೆಹ್ರ್ ತರರ್ ಜತೆ ಪತಿ ಹಾಗೂ ತಿರುವನಂತಪುರ ಸಂಸದ ಶಶಿ ತರೂರ್‌ಗೆ ಸಂಬಂಧವಿದೆ ಎಂಬ ಗುಮಾನಿಯಿಂದ ಟ್ವೀಟ್ ಸಮರ ನಡೆಸಿದ ಮರುದಿನವೇ ಸುನಂದಾ ಶವವಾಗಿದ್ದರು.
ಅವರ ಒಳಾಂಗಗಳ ಮಾದರಿಗಳನ್ನು ಕಳೆದ ಫೆಬ್ರವ ರಿಯಲ್ಲಿ ವಾಷಿಂಗ್ಟನ್‌ನ ಎಫ್‌ಐಬಿ ಪ್ರಯೋಗಾಲ ಯಕ್ಕೆ ಕಳುಹಿಸಲಾಗಿತ್ತು. ಸಾವಿಗೆ ವಿಷಪ್ರಾಶನ ಕಾರಣ ಎಂದು ಎಐಐಎಂಎಸ್ ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟ ಬಳಿಕ ಯಾವ ಬಗೆಯ ವಿಷ ಎನ್ನುವುದನ್ನು ತಿಳಿಯಲು ಈ ಪರೀಕ್ಷೆಗೆ ಕಳುಹಿಸ ಲಾಗಿತ್ತು. ಆದರೆ ಎಫ್‌ಐಬಿ ವರದಿ ಪೊಲೋನಿಯಂ ವಿಷಪ್ರಾಶನದಿಂದ ಆಕೆಯ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವರದಿಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ದಿಲ್ಲಿ ಪೊಲೀಸರಿಗೆ ಸಾಧ್ಯ ವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ವೈದ್ಯಕೀಯ ಮಂಡಳಿಗೆ ಕಳುಹಿಸಲಾಗಿತ್ತು.
ಈ ಪ್ರಕರಣದಲ್ಲಿ ಈಗಾಗಲೇ ಎಲ್ಲ ಪ್ರಮುಖ ಸಾಕ್ಷಿಗಳಾದ ತರೂರ್ ಅವರ ಮನೆ ಕೆಲಸದ ನಾರಾಯಣ ಸಿಂಗ್, ಚಾಲಕ ಬಜರಂಗಿ, ಕುಟುಂಬ ಸ್ನೇಹಿತ ಸಂಜಯ ದೇವನ್ ಸೇರಿದಂತೆ ಆರು ಮಂದಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗಿದೆ. ತರೂರ್ ಅವರನ್ನೂ ವಿಚಾರಣೆಗೆ ಗುರಿಪಡಿಸಲಾಗಿದೆ.







