ಪ್ರವಾಸಿ ತಾಣಗಳಲ್ಲಿನ ನೆರ್ಮಲ್ಯ ಕಾಪಾಡಲು ಆದ್ಯತೆ: ಸಚಿವ ದೇಶಪಾಂಡೆ

ಬೆಂಗಳೂರು, ಜ.15: ರಾಜ್ಯದಲ್ಲಿನ ಪ್ರವಾಸಿ ತಾಣಗಳಿಗೆ ಸಂಪರ್ಕ, ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆ ಕಲ್ಪಿಸಲು ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಪ್ರೇಕ್ಷಣೀಯ ಸ್ಥಳಗಳಲ್ಲಿನ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಶುಕ್ರವಾರ ಜೆ.ಪಿ.ನಗರದಲ್ಲಿನ ಇಲಾನ್ ಕನ್‌ವೆನ್ಷ್‌ನ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ಟೂರಿಸಂ ಫೇರ್ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮದಿಂದ ದೇಶದ ಜಿಡಿಪಿ ಅಭಿವೃದ್ಧಿಗೆ ಸಹಕಾರಿ. ಆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಭಾರತ ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿದ್ದು, ಪ್ರಸ್ತುತ ಇರುವ ಜಿಡಿಪಿ ದರವನ್ನು ವೃದ್ಧಿಸಬಹುದಾಗಿದೆ ಎಂದ ಅವರು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆ ದೇಶದ ಜಿಡಿಪಿಗೆ ಕೇವಲ ಶೇ.6.5ರಷ್ಟು ಮಾತ್ರ ತನ್ನ ಪಾಲು ನೀಡುತ್ತಿದೆ. ಈ ಅಂಕಿ ಅಂಶವನ್ನು ಇನ್ನಷ್ಟು ಹೆಚ್ಚಿಸುವ ಆವಶ್ಯಕತೆ ಇದೆ ಎಂದರು.
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಅಗತ್ಯ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು, ಈ ಕ್ಷೇತ್ರಕ್ಕೆ ಪಾಲುದಾರಿಕೆ ಅಗತ್ಯ ಎಂದ ದೇಶಪಾಂಡೆ, ರಾಜ್ಯದಲ್ಲಿಯೂ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ ‘ಪ್ರವಾಸಿ ಮಿತ್ರ’ ಯೋಜನೆ ಜಾರಿಗೊಳಿಸಿದ್ದು, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆಗೆ ಆಗಮಿಸುವ ಪ್ರವಾಸಿಗಳಿಗೆ ಸಹಾಯಕ್ಕೆ ಹಾಗೂ ಅವರ ಸುರಕ್ಷತೆಗೆ 175 ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಮುಂದಿನ ವರ್ಷ 250 ಮಂದಿ ಪ್ರವಾಸಿ ಮಿತ್ರರಿಗೆ ತರಬೇತಿ ನೀಡಲಾಗುವುದು ಎಂದರು.
ರಾಜ್ಯದಲ್ಲಿ 370 ಕಿ.ಮೀ. ಸಮುದ್ರ ತೀರವಿದ್ದು, ಅವುಗಳನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಪಡಿಸಲು ಉದ್ದೇಶಿಸಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ರಾಜ್ಯ ಸರಕಾರ 300 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದ ಅವರು, ಕೇಂದ್ರ ಸರಕಾರ ‘ಕರಾವಳಿ’ಯನ್ನು ನಿಯಂತ್ರಣ ವಲಯ ಎಂದು ಘೋಷಿಸಿದ್ದು, ನಿಯಮಗಳನ್ನು ಸಡಿಲಗೊಳಿಸಲು ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದರು.
ಪ್ರದರ್ಶನದಲ್ಲಿ ನ್ಯೂಝಿಲ್ಯಾಂಡ್, ಕೇರಳ, ಪಂಜಾಬ್, ತಮಿಳುನಾಡು ಸೇರಿದಂತೆ ವಿವಿಧ ದೇಶಗಳ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಖಾಸಗಿ ಹಾಗೂ ಸರಕಾರಿ ಮಳಿಗೆಗಳಿದ್ದು, ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದವು. ಮೂರು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.





