ಪ್ರತ್ಯೇಕ ಪ್ರಕರಣ: ಕೇವಲ 2 ಗಂಟೆ ಅವಧಿಯಲ್ಲಿ ನಾಲ್ಕು ಕಡೆ ಸರ ಅಪಹರಣ
ಬೆಂಗಳೂರು, ಜ. 15: ಉದ್ಯಾನನಗರಿ ಜನತೆ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರುವಾಗಲೇ ನಗರದ ನಾಲ್ಕು ಕಡೆ ಸರಗಳ್ಳರು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರ ಅಪಹರಣ ಮಾಡಿದ ನಾಲ್ಕು ಪ್ರಕರಣಗಳು ಶುಕ್ರವಾರ ವರದಿಯಾಗಿವೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯೊಬ್ಬರ ಬಳಿ ವಿಳಾಸ ಕೇಳುವ ನೆಪದಲ್ಲಿ ಆಗಮಿಸಿದ ದುಷ್ಕರ್ಮಿ ಆಕೆಯ ಕೊರಳಿನಲ್ಲಿದ್ದ 60 ಗ್ರಾಂ ಚಿನ್ನದ ಸರವನ್ನು ದೋಚಿದ ಘಟನೆ ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದ ಎಚ್‌ಆರ್ ಲೇಔಟ್‌ನ ನಿವಾಸಿ ನಾಗರತ್ನಾ (50) ಎಂಬವರು ಬೆಳಗ್ಗೆ 6ಗಂಟೆಯ ಸುಮಾರಿಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ ಸರಗಳ್ಳರು ಕೃತ್ಯ ನಡೆಸಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ವೃದ್ಧೆಯ ಸರಗಳವು: ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್‌ಜಿ ನಗರ 1ನೆ ಮುಖ್ಯರಸ್ತೆ 2ನೆ ಕ್ರಾಸ್‌ನಲ್ಲಿ ಹಾಲು ಖರೀದಿಸಲು ತೆರಳುತ್ತಿದ್ದ ವೃದ್ಧೆ ಲಕ್ಷ್ಮಮ್ಮ ಎಂಬವರ ಬಳಿಗೆ ವಿಳಾಸ ಕೇಳುವ ನೆಪದಲ್ಲಿ ಬಂದ ಸರಗಳ್ಳರು 70 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ ಎಂದು ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣ: ಇಲ್ಲಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ಧಗಂಗಾ ಶಾಲೆ ಸಮೀಪದ ಮನೆಯೊಂದರ ನಿವಾಸಿ ತೇನ್‌ಮೊಳಿ ಎಂಬವರು ಬೆಳಗ್ಗೆ 7:45ರ ಸುಮಾರಿನಲ್ಲಿ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ವೇಳೆ ವಿಳಾಸ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ದೋಚಿದ್ದಾರೆ.
ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಜ್ಞಾನಜ್ಯೋತಿ ನಗರದ ನಿವಾಸಿ ಉಮಾ ಎಂಬವರು ಬೆಳಗ್ಗೆ 8:15ರ ಸುಮಾರಿನಲ್ಲಿ ಮನೆಯ ಮುಂದೆ ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಸರಗಳ್ಳರು ವಿಳಾಸ ಕೇಳುವ ನೆಪದಲ್ಲಿ ಸರ ಕಸಿದು ಪರಾರಿಯಾಗಿದ್ದಾರೆ.
ಕೇವಲ 2:15 ಗಂಟೆ ಅಂತರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕು ಕಡೆಗಳಲ್ಲಿ ನಾಲ್ಕು ಲಕ್ಷ ರೂ. ಗಳಿಗೂ ಅಧಿಕ ಮೊತ್ತದ ನಾಲ್ಕು ಚಿನ್ನದ ಸರಗಳನ್ನು ಅಪಹರಿಸಿ ಪರಾರಿಯಾಗಿದ್ದಾರೆ. ನಾಲ್ಕು ಪ್ರಕರಣಗಳ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ತನಿಖೆ ಶೋಧ ಕಾರ್ಯ ಕೈಗೊಂಡಿದ್ದಾರೆ.







