ಕಾಡು ಸೇರಿದ್ದ ಮಾನಸಿಕ ಅಸ್ವಸ್ಥನಿಗೆ ಮೂಡಿಗೆರೆ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ
ಮೂಡಿಗೆರೆ, ಜ.15: ಸಾರಗೋಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೆಬ್ಬಳಗದ್ದೆ ಗ್ರಾಮದ ಮಾನಸಿಕ ಅಸ್ವಸ್ಥ ರಘುಪತಿ ಗುರುವಾರ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಪಟ್ಟಣದ ಎಂಜಿಎಂ ಸರಕಾರಿ ಸಾರ್ವಜನಿಕ ಅಸ್ಪತ್ರೆಗೆ ದಾಖಲಿ ಸಲಾಗಿದೆ.
ಹೆಬ್ಬಳಗದ್ದೆಯ ಕಮಲಮ್ಮ ಎಂಬವರ ಮೂವರು ಪುತ್ರರಲ್ಲಿ ಓರ್ವನಾಗಿರುವ ಈತನ ಇನ್ನಿಬ್ಬರು ಸಹೋದರರೂ ಮಾನಸಿಕ ಅಸ್ವಸ್ಥರು ಎಂಬುದು ಎಲ್ಲರನ್ನು ಒಮ್ಮೆಲೇ ಬೆಚ್ಚಿ ಬೀಳಿಸುತ್ತದೆ. ಅರಣ್ಯದಲ್ಲಿ ನಾಪತ್ತೆಯಾಗಿದ್ದ ರಘುಪತಿ ನೀರು, ಅನ್ನಹಾರ ಇಲ್ಲದೆ ಉಪವಾಸದಿಂದ ಸೊರಗಿದ್ದ ಎಂದು ಮೂಲಗಳು ತಿಳಿಸಿವೆ.
2002ರಲ್ಲಿ ಸಾರಗೋಡು ಮೀಸಲು ಅರಣ್ಯ ಎತ್ತಂಗಡಿ ಭೀತಿಯೇ ಕಮಲಮ್ಮರವರ ಮೂವರು ಗಂಡು ಮಕ್ಕಳು ಮಾನಸಿಕವಾಗಿ ನೊಂದುಕೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ. ಕಮಲಮ್ಮನ ಪುತ್ರಿ ತುಮಕೂರು ಜಿಲ್ಲೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಯಾರೋ ಅಪರಿಚಿತರು ಕೊಲೆ ಮಾಡಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಪುತ್ರಿಯ ಅಕಾಲಿಕ ಸಾವಿನಿಂದ ಕಮಲಮ್ಮರ ಕುಟುಂಬ ನಿರ್ವಹಣೆ ತೀವ್ರ ದುಸ್ತರವಾಗಿತ್ತು. ಈ ಸುದ್ದಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ಮೂಡಿಗೆರೆ ಪ್ರಧಾನ ಸಿವಿಲ್ ಜೆಎಂಎಫ್‌ಸಿ ನ್ಯಾಯಾಧೀಶ ನವೀನ್, ಹೆಬ್ಬಳಗದ್ದೆಗೆ ಭೇಟಿ ನೀಡಿದ್ದರು. ರೋಗಿಗಳನ್ನು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಸೂಚಿಸಿದ್ದರು. ಚಿಕ್ಕಮಗಳೂರು ಬಳಿಕ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಸಹೋದರರು ಗುಣಮುಖರಾಗಿದ್ದರು. ಈ ಪೈಕಿ ರಘುಪತಿ ಮತ್ತೆ ಮಾನಸಿಕ ಅಸ್ವಸ್ಥನಾಗಿ ಕಾಡು ಸೇರಿದ್ದನು. ಆತನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.







