ಯುವಕರಲ್ಲಿ ಸಂಸ್ಕಾರ, ಧಾರ್ಮಿಕ ಪ್ರಜ್ಞೆ ಅರಳಬೇಕು: ಪೇಜಾವರ ಶ್ರೀ

ಉಡುಪಿ, ಜ.15: ಯುವ ಪೀಳಿಗೆಯಲ್ಲಿ ಸನಾತನ ಸಂಸ್ಕೃತಿಯ ಬಗ್ಗೆ ಅಸಡ್ಡೆ ಬೆಳೆಯುತ್ತಿರುವುದು ವಿಷಾದದ ಸಂಗತಿ. ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತರಾಗದೆ ಭಾರತೀಯ ಸಂಸ್ಕಾರ, ನೈತಿಕ ಮೌಲ್ಯ ಮತ್ತು ಧಾರ್ಮಿಕ ಪ್ರಜ್ಞೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಹೇಳಿದ್ದಾರೆ.
ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಪರ್ಯಾಯ ಪೂರ್ವಭಾವಿ ಗೌರವ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚಿಸಿದರು. ಪೂರ್ಣಪ್ರಜ್ಞ ಕಾಲೇಜಿನ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಸಂಧ್ಯಾ ಕಾಲೇಜಿನ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕಾಲೇಜಿನ ಪ್ರಾಂಶುಪಾಲರುಗಳಾದ ಡಾ.ಬಿ. ಜಗದೀಶ ಶೆಟ್ಟಿ, ಡಾ. ಟಿ.ಎಸ್. ರಮೇಶ್, ಸಂದೀಪ್ ಕುಮಾರ್, ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಕಿಶೋರ್ ರಾವ್, ಪಿಐಎಂ ನಿರ್ದೇಶಕ ಡಾ.ಎಂ.ಆರ್. ಹೆಗ್ಡೆ, ವಿಶ್ರಾಂತ ಉಪಕುಲಪತಿ ಡಾ. ಬಿ.ಎಸ್.ಶೇರಿಗಾರ್ ಸ್ವಾಮೀಜಿಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ ಸಿದ್ಧಾಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





