ಮಸೂದ್ ರಕ್ಷಣಾ ಕಸ್ಟಡಿಯಲ್ಲಿ: ಪಾಕ್ ಸಚಿವ ಸ್ಪಷ್ಟನೆ

ಲಾಹೋರ್, ಜ.15: ಪಠಾಣ್‌ಕೋಟ್ ದಾಳಿಯ ರೂವಾರಿ ಎನ್ನಲಾದ ನಿಷೇಧಿತ ಜೈಷೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಹಾಗೂ ಆತನ ಸಹಚರರನ್ನು ರಕ್ಷಣಾ ಕಸ್ಟಡಿಗೆ ಪಡೆಯಲಾಗಿದೆ. ಆದರೆ ಅವರನ್ನು ಇದುವರೆಗೆ ಅಧಿಕೃತವಾಗಿ ಬಂಧಿಸಿಲ್ಲ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಕಾನೂನು ಸಚಿವ ರಾಣಾ ಸನಾವುಲ್ಲಾ ಸ್ಪಷ್ಟನೆ ನೀಡಿದ್ದಾರೆ.
ಜೈಷ್ ಮುಖಂಡರು ಪಂಜಾಬ್ ಪೊಲೀಸ್ ಪಡೆಯ ಉಗ್ರಗಾಮಿ ತಡೆ ವಿಭಾಗದ ಕಸ್ಟಡಿಯಲ್ಲಿದ್ದಾರೆ ಎಂದು ಡಾನ್ ನ್ಯೂಸ್‌ಗೆ ಹೇಳಿದ್ದಾರೆ. ಇದಕ್ಕೂ ಮುನ್ನ ಸರಕಾರ ಮಸೂದ್‌ನನ್ನು ಕಸ್ಟಡಿಗೆ ಪಡೆದಿರುವ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿತ್ತು.
ಮಸೂದ್ ಹಾಗೂ ಸಹಚರರು ಈಗ ನಮ್ಮ ಕಸ್ಟಡಿಯಲ್ಲಿದ್ದಾರೆ. ಪಠಾಣ್‌ಕೋಟ್ ದಾಳಿಯಲ್ಲಿ ಅವರ ಕೈವಾಡ ಸಾಬೀತಾದರೆ ತಕ್ಷಣ ಬಂಧಿಸಲಾಗುವುದು ಎಂದು ಸನಾವುಲ್ಲಾ ಹೇಳಿದ್ದಾರೆ. ದೇಶದಲ್ಲಿ ಜೈಷ್ ಸೇರಿದಂತೆ ನಿಷೇಧಿತ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆ ರಾಷ್ಟ್ರದ ಕಾರ್ಯಸೂಚಿಯಲ್ಲಿ ಮುಂದುವರಿಯಲಿದೆ ಎಂದು ಪ್ರಕಟಿಸಿದರು.
Next Story





