ಬ್ಯಾಗ್‌ನಲ್ಲಿ ಗೋಮಾಂಸದ ಆರೋಪ: ರೈಲಿನಲ್ಲಿ ದಂಪತಿಗೆ ಹಲ್ಲೆ

ಸಂಘಪರಿವಾರ ಕಾರ್ಯಕರ್ತರ ಕೃತ್ಯ
ಹಾರ್ದ (ಮಧ್ಯಪ್ರದೇಶ), ಜ.15: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಮ್ ದಂಪತಿಯನ್ನು ಸಂಘಪರಿವಾರ ಕಾರ್ಯಕರ್ತರು ಅಮಾನವೀಯವಾಗಿ ಥಳಿಸಿರುವ ಘಟನೆ ಜಿಲ್ಲೆಯ ಖಿರ್ಕಿಯಾ ರೈಲು ನಿಲ್ದಾಣದಲ್ಲಿ ನಡೆದಿದೆ.
ಏಳು ಮಂದಿ ಗೋರಕ್ಷ ಸಮಿತಿ ಕಾರ್ಯಕರ್ತರು ರೈಲಲ್ಲಿ ಸಹಪ್ರಯಾಣ ಮಾಡುತ್ತಿದ್ದ ಮುಸ್ಲಿಮ್ ದಂಪತಿ ಗೋಮಾಂಸ ಒಯ್ಯುತ್ತಿದ್ದಾರೆ ಎಂಬ ಗುಮಾನಿಯಿಂದ ಬ್ಯಾಗ್ ತಪಾಸಣೆ ಮಾಡಲು ಮುಂದಾದಾಗ ಇದಕ್ಕೆ ದಂಪತಿ ಆಕ್ಷೇಪಿಸಿದರು. ಇದನ್ನೇ ಕಾರಣವಾಗಿಟ್ಟುಕೊಂಡು ದಂಪತಿಗೆ ಥಳಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಚೀಲದಿಂದ ಗೋಮಾಂಸ ವಶಪಡಿಸಿಕೊಂಡಿದ್ದಾಗಿ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬುಧವಾರ ಖುಷಿನಗರ ಎಕ್ಸ್ ಪ್ರೆಸ್ ರೈಲಿನ ಸಾಮಾನ್ಯ ದರ್ಜೆ ಬೋಗಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಹೇಮಂತ ರಜಪೂತ್ ಹಾಗೂ ಸಂತೋಷ್ ಎಂಬ ಇಬ್ಬರು ಗೋರಕ್ಷ ಸಮಿತಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೆಲ ಪ್ರಯಾಣಿಕರು ಗೋಮಾಂಸವನ್ನು ರೈಲಿನಲ್ಲಿ ಒಯ್ಯುತ್ತಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆಸಿದ್ದಾಗಿ ಇವರು ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಹಲ್ಲೆಗೀಡಾದ ಕುಟುಂಬದ ಸದಸ್ಯರ ಮೇಲೂ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಅಸ್ವಸ್ಥರಾಗಿದ್ದ ಸಂಬಂಧಿಕರನ್ನು ಭೇಟಿ ಮಾಡಿ ತಮ್ಮ ಸ್ವಂತ ಪಟ್ಟಣವಾದ ಹಾರ್ದಕ್ಕೆ ಬರುತ್ತಿದ್ದಾಗ ತಮ್ಮನ್ನು ಹಾಗೂ 38 ವರ್ಷದ ಪತ್ನಿ ನಸೀಮಾ ಬಾನೊ ಅವರನ್ನು ಥಳಿಸಲಾಯಿತು ಎಂದು 43 ವರ್ಷದ ಮುಹಮ್ಮದ್ ಹುಸೈನ್ ಹೇಳಿದ್ದಾರೆ. ನಮ್ಮ ಬ್ಯಾಗ್ ತಪಾಸಣೆಗೆ ಮುಂದಾದ್ದನ್ನು ಪತ್ನಿ ಆಕ್ಷೇಪಿಸಿದಾಗ ಆಕೆಯನ್ನು ಪಕ್ಕಕ್ಕೆ ತಳ್ಳಿದರು.
ನಾವು ಭಾರತದಲ್ಲಿ ವಾಸಿಸುತ್ತಿದ್ದು, ಯಾವುದು ಸರಿ ಯಾವುದು ತಪ್ಪು ಎಂಬ ಬಗ್ಗೆ ಪರಿಜ್ಞಾನವಿದೆ. ನಾವು ಕೇವಲ ಆಡಿನ ಮಾಂಸ ತಿನ್ನುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಕ್ಕದಲ್ಲಿದ್ದ ಚೀಲದಿಂದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದ್ದು, ಅದು ನಮ್ಮದಾಗಿರಲಿಲ್ಲ. ಕೊನೆಗೆ ಪೊಲೀಸ್ ಪೇದೆ ಬಂದು ಪತ್ನಿಯನ್ನು ರಕ್ಷಿಸಿದರು ಎಂದು ಹುಸೇನ್ ವಿವರಿಸಿದರು.
ಪತ್ನಿಯ ಜತೆಗೆ ಅಸಭ್ಯವಾಗಿ ವರ್ತಿಸಿದ ಕಾರ್ಯಕರ್ತರ ಕ್ರಮವನ್ನು ಆಕ್ಷೇಪಿಸಿದ್ದಕ್ಕೆ ತಮ್ಮನ್ನು ಥಳಿಸಲಾಯಿತು ಎಂದು ಅವರು ಹೇಳಿದ್ದಾರೆ.
ಜನದಟ್ಟಣೆಯಿಂದ ಕೂಡಿದ್ದ ಬೋಗಿಯ ಬಾಗಿಲ ಬಳಿ ನಿಂತಿದ್ದೆ. ಕಾರ್ಯಕರ್ತರು ತಪಾಸಣೆ ಆರಂಭಿಸಿದಾಗ ಪತ್ನಿಗೆ ಬೇರೆ ಪ್ರಯಾಣಿಕರು ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟರು. ಕೆಲ ಪ್ರಯಾಣಿಕರ ಬ್ಯಾಗುಗಳನ್ನು ಅಡಿಮೇಲು ಮಾಡಿದಾಗ ಅದಕ್ಕೆ ಅವರು ಆಕ್ಷೇಪಿಸಿದರು. ಪತ್ನಿಯ ಬ್ಯಾಗ್ ತಪಾಸಣೆ ಮಾಡುವ ಮುನ್ನ ಸಹಪ್ರಯಾಣಿಕರ ಜತೆಯೂ ಉದ್ಧಟತನದಿಂದ ನಡೆದುಕೊಂಡರು. ಆಕೆಯೂ ಆಕ್ಷೇಪಿಸಿದಾಗ ಆಕೆಯನ್ನು ಶೌಚಾಲಯದತ್ತ ತಳ್ಳಿದರು.
ಆಗ ನಾನು ನಿಲ್ದಾಣ ಬಳಿ ವಾಸವಿದ್ದ ಸಂಬಂಧಿಕರಿಗೆ ಕರೆ ಮಾಡಿದೆ. ತಕ್ಷಣ ಆತ ಧಾವಿಸಿದ. ಇತರ ಸ್ಥಳೀಯರೂ ನಮ್ಮ ನೆರವಿಗೆ ಬಂದರು. ಆಗ ಉಭಯ ಗುಂಪುಗಳ ನಡುವೆ ಸಂಘರ್ಷ ಉಂಟಾಯಿತು ಎಂದು ಘಟನೆಯನ್ನು ಹುಸೇನ್ ವಿವರಿಸಿದರು







