ಚೀನಾ-ಪಾಕ್ ಯುದ್ಧ ವಿಮಾನಕ್ಕೆ ಭಾರತದ ತೇಜಸ್ ಸೆಡ್ಡು
ಹೊಸದಿಲ್ಲಿ: ಭಾರತ ಸಿದ್ಧಪಡಿಸಿದ ತೇಜಸ್ ಯುದ್ಧವಿಮಾನ ಹಾಗೂ ಚೀನಾ- ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬಹುಕಾರ್ಯ ಸಾಮರ್ಥ್ಯದ ಜೆಎಫ್-17 ಥಂಡರ್ ಯುದ್ಧವಿಮಾನಗಳು ಮೊತ್ತ ಮೊದಲ ಬಾರಿಗೆ ಬಹರೈನ್‌ನಲ್ಲಿ ಈ ತಿಂಗಳ 21ರಿಂದ 23ರವರೆಗೆ ನಡೆಯುವ ವಾಯು ಪ್ರದರ್ಶನದಲ್ಲಿ ಮುಖಾಮುಖಿಯಾಗಲಿವೆ.
ಭಾರತದ ಈ ಯುದ್ಧವಿಮಾನ ವಿದೇಶದಲ್ಲಿ ಹಾರಾಡುವುದು ಇದೇ ಮೊದಲು. ಇದು ಥಂಡರ್‌ಗಿಂತ ಹೇಗೆ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲದು ಎನ್ನುವದು ಇಲ್ಲಿ ಖಚಿತವಾಗಲಿದೆ. ರಕ್ಷಣಾ ಸಚಿವಾಲಯದ ಅಧಿಕಾರಿಗಳ ಪ್ರಕಾರ, ತೇಜಸ್, ಜೆಎಫ್-17 ಥಂಡರ್‌ಗಿಂತ ಕನಿಷ್ಠ ಐದು ಬಗೆಯಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇದು ಈ ಪ್ರದರ್ಶನದ ಮೂಲಕ ಸಾಬೀತಾಗಲಿದೆ.
ಈ ಪ್ರದರ್ಶನದಲ್ಲಿ ತೇಜಸ್ ಕ್ಷಮತೆಯನ್ನು ತಾಂತ್ರಿಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಸ್ವಯಂಚಾಲಿತ ಮಾಹಿತಿ ವ್ಯವಸ್ಥೆಯಾದ ಟೆಲೆಮೆಟ್ರಿ ಘಟಕ ಮಾಹಿತಿಯನ್ನು ಸಂಗ್ರಹಿಸಿ ಕ್ಷಮತೆಯನ್ನು ಮೌಲ್ಯಮಾಪನ ಮಾಡಲಿದೆ.
ಒಟ್ಟು 20 ವಿಮಾನಗಳನ್ನು ಪ್ರದರ್ಶನಕ್ಕೆ ಕಳುಹಿಸಲು ವಾಯುಪಡೆ ನಿರ್ಧರಿಸಿದೆ. ಬೆಂಗಳೂರು ಮೂಲದ ಎಚ್‌ಎಎಲ್ ಪ್ರಕಾರ 15 ವಿಮಾನಗಳು ಭಾಗವಹಿಸಲಿವೆ.
ಪಾಕಿಸ್ತಾನದ ಜೆಎಫ್-17 ಕಿಲ್ಮೋವ್ ಆರ್‌ಡಿ 93 ಎಂಜಿನ್ ಬಳಸಿದೆ. ತೇಜಸ್ ಯೋಜನೆ ಹಲವು ದಿನಗಳಿಂದ ವಿವಾದದ ಕೇಂದ್ರವಾಗಿತ್ತು. ವಿಮಾನ ತಯಾರಿಕೆಯಲ್ಲಿ ಆದ ವಿಳಂಬ ಮಾತ್ರವಲ್ಲದೇ, ಅದರ ಕ್ಷಮತೆ ಬಗ್ಗೆಯೂ ಅಪಸ್ವರ ಕೇಳಿಬಂದಿತ್ತು.
ಆದರೆ ದೇಶೀಯವಾಗಿ ಮಾಡಲಾದ ತುಲನೆಯ ಅನ್ವಯ ತೇಜಸ್ ಉತ್ತಮ ಸಾಮರ್ಥ್ಯ ಹೊಂದಿದ್ದು, ಜೆಫ್-17 ಥಂಡರ್‌ಗಿಂತ ಪ್ರಭಾವಶಾಲಿ ಎಂದು ರಕ್ಷಣಾ ಸಚಿವಾಲಯ ಅಧಿಕಾರಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಎರಡೂ ವಿಮಾನಗಳ ಎಂಜಿನ್‌ಗಳು ಸಮಾನ ಸಾಮರ್ಥ್ಯದ್ದಾಗಿವೆ. ಜೆಫ್-17 ಕ್ಲಿಮೋವ್ ಆರ್‌ಡಿ 93 ಎಂಜಿನ್ ಬಳಸಿದ್ದರೆ, ತೇಜಸ್ ಜಿಇ-ಎಫ್404-ಐಎನ್20 ಎಂಜಿನ್ ಬಳಸಿದೆ. ಆದರೆ ಇತರ ಕ್ಷೇತ್ರಗಳಲ್ಲಿ ತೇಜಸ್ ಭಿನ್ನವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಜೆಫ್-17ಗಿಂತ ಹೆಚ್ಚು ದೂರದ ವರೆಗೆ ತೇಜಸ್ ಹಾರಬಹುದಾಗಿದೆ. ತೇಜಸ್ ಸಾಮರ್ಥ್ಯ 2,300 ಕಿಲೋಮೀಟರ್ ಇದ್ದರೆ, ಜೆಫ್-17 ಕೇವಲ 2,037 ಕಿಲೋಮೀಟರ್ ಸಾಮರ್ಥ್ಯವನ್ನಷ್ಟೇ ಹೊಂದಿದೆ. ತೇಜಸ್ 2,500 ಕೆಜಿ ಇಂಧನ ಒಯ್ಯುವ ಸಾಮರ್ಥ್ಯದ್ದಾಗಿದ್ದು, ಜೆಎಫ್-17 2,300 ಕಿಲೋ ಒಯ್ಯಬಲ್ಲದು.
ತೇಜಸ್‌ಗೆ ಮರು ಇಂಧನ ತುಂಬಿಸಬಹುದಾಗಿದ್ದು, ಜೆಎಫ್-17ಗೆ ಈ ಅವಕಾಶ ಇಲ್ಲ. ತೇಜಸ್ 460 ಮೀಟರ್‌ನಲ್ಲೇ ಆಕಾಶಕ್ಕೆ ಚಿಮುತ್ತದೆ. ಆದರೆ ಜೆಎಫ್-17ಗೆ 600 ಮೀಟರ್ ಅಂತರ ಬೇಕಾಗುತ್ತದೆ.







