ಚುನಾವಣೆಗಾಗಿ ರಾಮಮಂದಿರ ಕೆದಕುತ್ತಿರುವ ಬಿಜೆಪಿ: ಬಿಎಸ್ಪಿ ಅಧ್ಯಕ್ಷೆ ಮಾಯಾವತಿ

ಲಕ್ನೊ: ಮುಂದಿನ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿರಿಸಿಕೊಂಡು ಬಿಜೆಪಿ ರಾಮಮಂದಿರದ ವಿಷಯವನ್ನು ಕೆದಕುತ್ತಿದೆಯೆಂದು ಆರೋಪಿಸಿರುವ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಿಲ್ಲಿ ಹಾಗೂ ಬಿಹಾರಗಳಂತೆಯೇ ರಾಜ್ಯದ ಮತದಾರರೂ ಅವರ ‘ನಾಟಕಗಳಿಗೆ’ ಬಲಿಯಾಗುವುದಿಲ್ಲವೆಂದು ಅವರಿಂದು ಹೇಳಿದ್ದಾರೆ.
ಕೇಂದ್ರ ಸರಕಾರವು ಕೋಮುವಾದಿ ಶಕ್ತಿಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಿದೆ. ಅದರಿಂದಾಗಿ ದೇಶದಲ್ಲಿ ಕ್ಷೋಭೆ ಉಂಟಾಗಿದೆಯೆಂದು ಇಂದು 60ನೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹತ್ತಿರಬರುತ್ತ್ತಿರುವಂತೆಯೇ, ಬಿಜೆಪಿ, ಆರೆಸ್ಸೆಸ್ ಹಾಗೂ ಇತರ ಸಂಘಟನೆಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿರುವ ರಾಮಮಂದಿರದ ವಿವಾದವನ್ನು ಕೆದಕುತ್ತಿವೆ. ಮತಗಳಿಗಾಗಿ ಧಾರ್ಮಿಕ ಭಾವನೆಯೊಂದಿಗೆ ಆಟವಾಡುವ ತಂತ್ರ ಕೆಲಸಕ್ಕೆಬಾರದು ಎಂದು ಮಾಯಾವತಿ ಪತ್ರಕರ್ತರಿಗೆ ತಿಳಿಸಿದರು.
ಕೇಂದ್ರ ಸರಕಾರವು ಬಿ.ಆರ್.ಅಂಬೇಡ್ಕರರ ಹೆಸರಿನಲ್ಲಿ ದಲಿತ ಮತದಾರರನ್ನು ಪುಸಲಾಯಿಸಲು ಯತ್ನಿಸುತ್ತಿದೆಯೆಂದು ಆರೋಪಿಸಿದ ಮಾಯಾವತಿ, ಅದು ನಿಜವಾಗಿ ಗಂಭೀರವಾಗಿದ್ದರೆ, ಬಾಬಾ ಸಾಹೇಬರ 125ನೆ ಜನ್ಮ ವರ್ಷದಲ್ಲಿ ದಲಿತರು ಹಾಗೂ ಅಂಬೇಡ್ಕರ್‌ರ ಹಿಂದುಳಿದ ಬೆಂಬಲಿಗರಿಗಾಗಿ ಕೆಲಸ ಮಾಡಲು ನಿರ್ಧರಿಸುತ್ತಿತ್ತು. ಕೇಂದ್ರ ಸರಕಾರವು ಭಡ್ತಿಗಳಲ್ಲಿ ಮೀಸಲಾತಿಯ ಮಸೂದೆಯನ್ನು ಮಂಜೂರು ಮಾಡುತ್ತಿತ್ತು. ಅದು ಸಂವಿಧಾನ ತಿದ್ದುಪಡಿಯ ಮೂಲಕ, ಇತರ ಜಾತಿಗಳಿಗೆ ವಲಸೆ ಹೋಗಿರುವ ಬಡವರು ಹಾಗೂ ಮೇಲ್ಜಾತಿಯ ಬಡವರಿಗೆ ಮೀಸಲಾತಿ ಒದಗಿಸುತ್ತಿತ್ತು. ಆದರೆ, ಅದು ಈ ಬಗ್ಗೆ ಏನೂ ಮಾಡಿಲ್ಲವೆಂದು ದೂರಿದರು.
ದೇಶದ ಪಾಕಿಸ್ತಾನ ನೀತಿಯ ಕುರಿತು ಪ್ರಶ್ನೆಯೆತ್ತಿದ ಅವರು, ಪಾಕಿಸ್ತಾನದ ಕುರಿತಾದ ಬಿಜೆಪಿಯ ನೀತಿ ಸ್ಥಿರವಾಗಿಲ್ಲವೆಂದು ಟೀಕಿಸಿದರು.
ಈ ಸಂದರ್ಭದಲ್ಲಿ ಅವರು ತನ್ನ ‘ನನ್ನ ಸಂಕಷ್ಟಕರ ಬದುಕಿ ಪ್ರಯಾಣ ಮತ್ತು ಬಿಎಸ್ಪಿ ಚಳವಳಿ’ಯ 11ನೇ ಸಂಪುಟವನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಗೊಳಿಸಿದರು.







