ಪ್ರತಿಭಟನೆ, ದಾಂಧಲೆಗೆ ಸುಪ್ರೀಂ ಕಡಿವಾಣ
ಹೊಸದಿಲ್ಲಿ: ಪ್ರತಿಭಟನೆ, ಹೋರಾಟಗಳ ವೇಳೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಕೊಳ್ಳಿ ಇಡುವುದು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವವರಿಂದ ನಷ್ಟ ಪರಿಹಾರ ಪಡೆಯುವ ಸಂಬಂಧ ಹೊಸ ಮಾರ್ಗಸೂಚಿಯನ್ನು ಇಷ್ಟರಲ್ಲೇ ಬಿಡುಗಡೆ ಮಾಡುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಪ್ರಕಟಿಸಿದೆ.
ಇಂಥ ಕೃತ್ಯಗಳು ಪ್ರತಿ ದಿನವೂ ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಕೋರ್ಟ್ ಏಳು ವರ್ಷಗಳ ಹಿಂದೆ ನೀಡಿರುವ ತೀರ್ಪಿನಲ್ಲಿ, ಇಂಥ ಕೃತ್ಯಗಳ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ರಾಜಕೀಯ ಪಕ್ಷಗಳಿಂದ ಮತ್ತು ಮುಖಂಡರಿಂದ ನಷ್ಟ ಪರಿಹಾರ ಪಡೆಯಬಹುದು ಎಂದು ಸೂಚಿಸಿದ್ದರೂ, ಅದು ಕಾಗದದಲ್ಲಷ್ಟೇ ಉಳಿದಿದೆ.
ಈ ಶಿಫಾರಸು ವಾಸ್ತವವಾಗಿ ಜಾರಿಗೆ ಬರಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ರಾಜಕೀಯ ಪಕ್ಷಗಳು ತಮ್ಮ ವಿಧ್ವಂಸಕ ಕೃತ್ಯಗಳಿಗೆ ನಷ್ಟ ಪರಿಹಾರ ಕೊಡುವಂತೆ ಮಾಡುವುದು ಸರಕಾರಕ್ಕೆ ಕಷ್ಟಸಾಧ್ಯ ಎನಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನು ರಾಜಕೀಯವಾಗಿ ನಿರ್ವಹಿಸಲು ಸಾಧ್ಯವೇ? ಈ ಬಗ್ಗೆ ನಾವೇ ಕ್ರಮ ಕೈಗೊಳ್ಳಬೇಕು ಎಂದು ಜೆ.ಎಸ್.ಖೇಹರ್ ಹಾಗೂ ಸಿ.ನಾಗಪ್ಪನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.





