ಸೆಲ್ಫಿ ಸಾವಲ್ಲಿ ಭಾರತ ಮುಂದು
ಮುಂಬೈ: ವಿಶ್ವಾದ್ಯಂತ ಕಳೆದ ವರ್ಷ 27 ಸೆಲ್ಫಿ ಸಾವುಗಳು ಸಂಭವಿಸಿದ್ದು, ಈ ಪೈಕಿ ಅರ್ಧದಷ್ಟು ಸಾವು ಭಾರತದಲ್ಲೇ ಸಂಭವಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಸೆಲ್ಫಿ ಕ್ಲಿಕ್ಕಿಸುವ ಸಂದರ್ಭ ಚಲಿಸುವ ರೈಲಿನಿಂದ ಬಿದ್ದು, ದೋಣಿಯಿಂದ ಬಿದ್ದು, ಬಂಡೆಗಳಿಂದ ಉರುಳಿ, ಕಾಲುವೆಗೆ ಕಾಲುಜಾರಿ ಬಿದ್ದು, ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿ ಭಾರತೀಯರು ಸಾವಿಗೀಡಾಗಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ತಾಜ್‌ಮಹಲ್ ಮೆಟ್ಟಲಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಜಪಾನಿ ಪ್ರಜೆ ಬಿದ್ದು ಮೃತಪಟ್ಟಿದ್ದರು.
ಮುಂಬೈ ಪೊಲೀಸರು ಪಕ್ಕದ ಸಮುದ್ರ ಕಿನಾರೆ ಹಾಗೂ ಕೋಟೆಗಳನ್ನು ಗುರುತಿಸುವ ಕಾರ್ಯ ನಡೆಸಿದ್ದು, ಇಲ್ಲಿ ಸೆಲ್ಫಿ ನಿಷೇಧಕ್ಕೆ ಮುಂದಾಗಿದೆ. ಇದುವರೆಗೂ ಸೆಲ್ಫಿಗೆ ಅವಕಾಶ ಇಲ್ಲದ ಯಾವ ಪ್ರದೇಶವನ್ನೂ ನಾವು ಗುರುತಿಸಿಲ್ಲ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಯೋಚನೆ ಇದೆ. ಇದುವರೆಗೆ ಯಾರನ್ನೂ ಇದಕ್ಕೆ ಸಂಪರ್ಕಿಸಿಲ್ಲ. ಆದರೆ ಈ ಪ್ರಕ್ರಿಯೆ ಆರಂಭವಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಧನಂಜಯ ಕುಲಕರ್ಣಿ ಹೇಳಿದ್ದಾರೆ.
ಇದು ಜನವರಿ 9ರಂದು ನಡೆದ ಘಟನೆಯ ಪ್ರತಿಫಲ. ಅಂದು ಬೆಳಿಗ್ಗೆ 11ರ ಸುಮಾರಿಗೆ 18 ವರ್ಷದ ತರನ್ನುಮ್ ಅನ್ಸಾರಿ ಹಾಗೂ ಆಕೆಯ ಇಬ್ಬರು ಸಹಪಾಠಿಗಳಾದ ಅಂಜುಮ್ ಖಾನ್ ಹಾಗೂ ಮಸ್ತೂರಿಖಾನ್ ಬ್ಯಾಂಡ್‌ಸ್ಟ್ಯಾಂಡ್‌ಗೆ ಪಿಕ್‌ನಿಕ್ ಹೋದರು. ಅನ್ಸಾರಿ ಹಾಗೂ ಆಕೆಯ ಇಬ್ಬರು ಸ್ನೇಹಿತೆಯರು, ಬಾಂದ್ರ ಕೋಟೆಯ 50 ಅಡಿಯಷ್ಟು ಕೆಳಗೆ ಕಲ್ಲಿನ ತುದಿಯಲ್ಲಿ ನಿಂತು ಸೆಲ್ಫಿ ತೆಗೆಯುತ್ತಿದ್ದಾಗ ಜಾರಿ ಬಿದ್ದರು. ಅಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ರಮೇಶ್ ವಲುಂಜ್, ಕೋಟೆ ಬದಿಯಿಂದ ಸಹಾಯಕ್ಕಾಗಿ ಬೊಬ್ಬೆ ಹಾಕುತ್ತಿದ್ದುದನ್ನು ಕೇಳಿಸಿಕೊಂಡ. ಹುಡುಗಿಯರನ್ನು ರಕ್ಷಿಸಲು ರಮೇಶ್ ಧುಮುಕಿದ.
ಅಂಜುಮ್ ಹಾಗೂ ಮಸ್ತೂರಿಯನ್ನು ಹೊರಕ್ಕೆ ತಂದು ದಡದಲ್ಲಿ ಬಿಟ್ಟು ಮತ್ತೆ ತರನ್ನುಮ್ ಅವರ ರಕ್ಷಣೆಗೆ ಧಾವಿಸಿದ್ದು ಫಲಕಾರಿಯಾಗಲಿಲ್ಲ. ರಮೇಶ್ ವಲುಂಜ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದ್ದು, ತರನ್ನುಮ್ ಇನ್ನೂ ನಾಪತ್ತೆಯಾಗಿದ್ದಾಳೆ.
ಕಳೆದ ವರ್ಷದ ನಾಸಿಕ್ ಹಾಗೂ ತ್ರಯಂಬಕೇಶ್ವರ ಕುಂಭಮೇಳದಲ್ಲಿ ಅಧಿಕಾರಿಗಳು, ಸೆಲ್ಫಿ ನಿಷೇಧ ಪ್ರದೇಶ ಗುರುತಿಸಿದ್ದರು. ಏಕೆಂದರೆ ಈ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಾ ನಿಂತರೆ ನೂಕುನುಗ್ಗಲು, ಕಾಲ್ತುಳಿತ ಸಂಭವಿಸಬಹುದು ಎಂಬ ಭೀತಿಯಿಂದ ಈ ಕ್ರಮ ಕೈಗೊಂಡಿದ್ದರು.







