ಎರಡು ಬಾರಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿ ಬಿಡುಗಡೆ !

ಕೊಲ್ಕತ್ತಾ: ಬೆಹ್ರಾಂಪುರ ವಿಚಾರಣಾ ನ್ಯಾಯಾಲಯದಿಂದ ಎರಡು ಬಾರಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮಂದ ದೃಷ್ಟಿಯ ಆರೋಪಿಯೊಬ್ಬರನ್ನು ಕೊಲ್ಕತ್ತಾ ಹೈಕೋರ್ಟ್ ಆರೋಪಮುಕ್ತಗೊಳಿಸಿದೆ. ಈ ಹಿನ್ನೆಲೆಯಲ್ಲಿ 2009ರ ಏಪ್ರಿಲ್‌ನಿಂದ ಜೈಲಿನಲ್ಲಿದ್ದ ವ್ಯಕ್ತಿ ಬಿಡುಗಡೆಯಾಗಿದ್ದಾರೆ.
ಬಾಬು ಮೊಲ್ಲಾ ಎಂಬ ವ್ಯಕ್ತಿ ಐದು ವರ್ಷದ ಬಾಲಕನನ್ನು ಕೊಂದು ಆತನ ಕಣ್ಣನ್ನು ತನಗೆ ಕಸಿ ಮಾಡಿಸಿಕೊಳ್ಳಲು ಯತ್ನಿಸಿದ್ದ ಎಂಬ ಆರೋಪ ಇತ್ತು. ಡಿಸೆಂಬರ್ 7ರಂದು ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಐಮೂರ್ತಿಗಳಾದ ಅಶೀಂ ಕುಮಾರ್ ರಾಯ್ ಹಾಗೂ ಮಮ್ತಾಜ್ ಖಾನ್, ತನಿಖೆಯಲ್ಲಿ ಮತ್ತು ಅಧಿಕಾರಿಗಳ ಸಾಕ್ಷ್ಯಗಳಲ್ಲಿ ಲೋಪ ಇರುವುದನ್ನು ಪತ್ತೆ ಮಾಡಿತ್ತು. ಮೊಲ್ಲಾ ವಿರುದ್ಧ ಯಾವುದೇ ನೇರ ಸಾಕ್ಷಿಗಳಿಲ್ಲ ಎಂದು ಹೇಳಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿತು.
ಇದಕ್ಕೂ ಮುನ್ನ ಹಿರಿಯ ವಕೀಲ ಶೇಖರ್ ಬಸು ಅವರನ್ನು ವಿಚಾರಣಾ ನ್ಯಾಯಾಲಯ ತೀರ್ಪಿನ ವಿಶ್ಲೇಷಣೆಗೆ ಕೇಳಿಕೊಂಡಿತ್ತು. ಅವರು ಕೂಡಾ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಹಲವು ಸಮಸ್ಯೆಗಳಿರುವುದನ್ನು ಸ್ಪಷ್ಟಪಡಿಸಿದ್ದರು.
ಮೊಲ್ಲಾ ಅವರ ಗ್ರಾಮದಲ್ಲಿ ಒಬ್ಬ ಹುಡುಗ ನಾಪತ್ತೆಯಾಗಿದ್ದ. ಎರಡು ದಿನಗಳ ಬಳಿಕ ಮತ್ತೊಬ್ಬ ಬಾಲಕ ಸಿಫಾನ್, ತಾನು ಹಾಗೂ ನಾಪತ್ತೆಯಾದದ ಬಾಲಕ ಸೊಹೇಲ್ ಆಟವಾಡುತ್ತಿದ್ದಾಗ ಮೊಲ್ಲಾ ನಮ್ಮನ್ನು ಮನೆಗೆ ಕರೆದರು. ಮೊಲ್ಲಾ ಸೊಹೇಲ್‌ನನ್ನು ಮನೆಯಲ್ಲೇ ಉಳಿಸಿಕೊಂಡು ನನ್ನನ್ನು ಕಳುಹಿಸಿದರು ಎಂದು ಬಹಿರಂಗಪಡಿಸಿದ.
ಮೊಲ್ಲಾ ಕುಟುಂಬ ಕಣ್ಣು ಕಸಿಗಾಗಿ ಕಣ್ಣು ಪಡೆಯಲು ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇವರ ಮೇಲೆ ಅನುಮಾನಪಟ್ಟು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದಾಗ ಏನೂ ಪತ್ತೆಯಾಗಿರಲಿಲ್ಲ.
ಮೂರು ದಿನ ಬಳಿಕ ಗ್ರಾಮದ ಹಸೀನಾ ಬೀವಿ ಎಂಬವರು ಮೊಲ್ಲಾನ ತಾಯಿ ಮಂಜುಮಾ ಕೆರೆಗೆ ಒಂದು ಗೋಣಿಚೀಲ ಎಸೆಯುತ್ತಿದ್ದುದನ್ನು ನೋಡಿದರು. ಆಕೆ ಎಚ್ಚರಿಕೆಯ ಸಂದೇಶ ರವಾನಿಸಿದಳು. ಆ ಗೋಣಿ ಚೀಲದಲ್ಲಿ ಸೋಹೆಲ್‌ನ ಮೃತದೇಹ ಇತ್ತು. ಅದು 48-72 ಗಂಟೆ ಮುಂಚಿತವಾಗಿ ಅದು ಮೃತಪಟ್ಟಿತ್ತು.
ಕುತ್ತಿಗೆಯಲ್ಲಿ ಆಳವಾದ ಗಾಯ ಕಂಡುಬಂದಿತ್ತು. ಕಣ್ಣು ಕೀಳಲಾಗಿತ್ತು. ಈ ಸಂಬಂಧ ಪೊಲೀಸರು ಮೊಲ್ಲಾ, ಆತನ ತಾಯಿ ಹಾಗೂ ಇತರ ಮೂವರನ್ನು ಬಂಧಿಸಿದರು. ಪೊಲೀಸರು ಮತ್ತೆ ಅವರ ಮನೆ ತಪಾಸಣೆ ನಡೆಸಿದಾಗ ಗೋಡೆಯಲ್ಲಿ ರಕ್ತದ ಕಲೆಗಳು, ಸಿರಿಂಜ್ ಹಾಗೂ ಬಾಟಲಿ ಕಂಡುಬಂದವು. ನಾಲ್ಕು ದಿನ ಬಳಿಕ ಆರೋಪಿಯ ಹೇಳಿಕೆಯನ್ನು ಆಧರಿಸಿ ಮತ್ತೆ ತಪಾಸಣೆ ನಡೆಸಿದಾಗ ಚಾಕು ಪತ್ತೆಯಾಗಿ, ಇದನ್ನು ಹತ್ಯೆಗೆ ಬಳಸಿದ ಆಯುಧ ಎಂದು ಬಿಂಬಿಸಲಾಯಿತು.
ವಿಚಾರಣಾ ನ್ಯಾಯಾಲಯ ಮೊಲ್ಲಾ ಹಾಗೂ ತಾಯಿಗೆ ಶಿಕ್ಷೆ ವಿಧಿಸಿ ಇತರರನ್ನು ಆರೋಪಮುಕ್ತಗೊಳಿಸಿತು. ಮೊಲ್ಲಾಗೆ ಗಲ್ಲು ಶಿಕ್ಷೆ ಹಾಗೂ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2015ರ ಫೆಬ್ರವರಿಯಲ್ಲಿ, ಇದರಲ್ಲಿ ಕಾನೂನು ಲೋಪಗಳನ್ನು ಪತ್ತೆ ಮಾಡಿದ ಹೈಕೋರ್ಟ್ ಮರು ತನಿಖೆಗೆ ಆದೇಶಿಸಿತು. ಮತ್ತೆ ವಿಚಾರಣಾ ನ್ಯಾಯಾಲಯದಿಂದ ಅದೇ ತೀರ್ಪು ಬಂತು.
ತಾಯಿಗೆ ಆ ಮೃತದೇಹ ಇದ್ದ ಗೋಣಿಚೀಲ ಹೇಗೆ ಸಿಕ್ಕಿತು ಎಂಬ ಬಗ್ಗೆ ವಿಚಾರಣಾ ನ್ಯಾಯಾಲಯ ಮೊಲ್ಲಾ ಅವರನ್ನು ಪ್ರಶ್ನಿಸಿಲ್ಲ. ತನಿಖಾಧಿಕಾರಿಯ ಸಾಕ್ಷ್ಯ ಕೂಡಾ ವೈರುದ್ಧ್ಯದಿಂದ ಕೂಡಿದೆ. ಸಾಕ್ಷಿ ಕೂಡಾ ತನಿಖಾಧಿಕಾರಿಗೆ ಭಿನ್ನ ಹೇಳಿಕೆ ನೀಡಿದ್ದಾನೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಮುಲ್ಲಾ ಬಿಡುಗಡೆಗೆ ಆದೇಶಿಸಿದೆ ಹಾಗೂ ಮಂಜುಮಾ ವಿರುದ್ಧದ ವಿಚಾರಣೆ ಮುಂದವರಿಸುವಂತೆ ಆದೇಶ ನೀಡಿದೆ.







