ಸುನಂದಾ ಪುಷ್ಕರ್ ಸಾವಿಗೆ ವಿಷಪ್ರಾಶನ ಕಾರಣ: ಎಫ್ಐಬಿ

ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಶಶಿ ತರೂರ್ ಅವರ ನಿಗೂಢ ಸಾವಿಗೆ ವಿಷಪ್ರಾಶನ ಕಾರಣ ಎಂಬ ಎಐಐಎಂಎಸ್ ತಜ್ಞರ ಅಭಿಪ್ರಾಯವನ್ನು ಎಫ್‌ಐಬಿ ವರದಿ ಸಮರ್ಥಿಸಿದೆ. ಆಕೆಯ ದೇಹದಲ್ಲಿ "ಅಪಾಯಕಾರಿ ರಾಸಾಯನಿಕ" ಪತ್ತೆಯಾಗಿದ್ದು, ಇದು ಆಕೆಯ ಸಾವಿಗೆ ಕಾರಣವಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಎಫ್‌ಐಬಿ ಅಭಿಪ್ರಾಯವನ್ನು ವಿಶ್ಲೇಷಿಸಿದ ಎಐಐಎಂಎಸ್ ವರದಿ ಸ್ವೀಕರಿಸಿರುವುದನ್ನು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಖಚಿತಪಡಿಸಿದ್ದಾರೆ. ಸುನಂದಾ ಸಾವು ಸಹಜವಲ್ಲ; ಆದರೆ ಆಕೆ ಒಳಾಂಗಗಳಲ್ಲಿ ಯಾವುದೇ ವಿಕಿರಣ ವಸ್ತುಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಎಐಐಎಂಎಸ್ ಮೊದಲೇ ನಿರ್ಧರಿಸಿದ್ದಂತೆ ವಿಷಪ್ರಾಶನ ಈ ಸಾವಿಗೆ ಕಾರಣ ಎನ್ನುವುದನ್ನು ಎಫ್‌ಐಬಿ ವರದಿ ಸಮರ್ಥಿಸಿದೆ ಎಂದು ಎಐಐಎಂಎಸ್ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಸುಧೀರ್ ಗುಪ್ತಾ ಅಭಿಪ್ರಾಯಪಟ್ಟಿರುವುದಾಗಿ ವಿವರಿಸಿದರು.
"ಸುನಂದಾ ಸಾವು ಸಹಜವಲ್ಲ ಎನ್ನುವುದು ಸ್ಪಷ್ಟ. ಇದುವರೆಗಿನ ನಮ್ಮ ತನಿಖೆಯಂತೆ ಹಾಗೂ ಸಾಕ್ಷ್ಯಗಳ ಪ್ರಕಾರ ಅದು ಅಸಹಜ ಸಾವು ಎಂದು ನಿಖರವಾಗಿ ಹೇಳಬಹುದು. ಆದರೆ ಆಕೆಯ ದೇಹದಲ್ಲಿ ಅಪಾಯಕಾರಿ ರಾಸಾಯನಿಕ ಇತ್ತೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವುದೇ ವಿಕಿರಣ ವಸ್ತು ದೇಹದ ಒಳಾಂಗಗಳಲ್ಲಿ ಇರಲಿಲ್ಲ ಎನ್ನುವುದನ್ನು ಎಫ್‌ಐಬಿ ವರದಿ ಸ್ಪಷ್ಟಪಡಿಸಿದೆ. ಇತರ ಕೆಲ ಅಂಶಗಳಿದ್ದವು. ಇಡೀ ವರದಿಯನ್ನು ನಾವು ವೈದ್ಯಕೀಯ ಮಂಡಳಿಗೆ ನೀಡಿದ್ದು, ಇದನ್ನು ಪರಿಶೀಲಿಸುತ್ತಿದೆ" ಎಂದು ವಿವರ ನೀಡಿದರು.
ಗುಪ್ತಾ ಅವರ ಪ್ರಕಾರ, ವಿಕಿರಣ ವಸ್ತು ಆಕೆಯ ಒಳಾಂಗಗಳ ಮಾದರಿಯಲ್ಲಿ ಇಲ್ಲ ಎಂದು ಎಫ್‌ಬಿಐ ಖಚಿತವಾಗಿ ಹೇಳಿಲ್ಲ. ಆದರೆ ಒಳಾಂಗಗಳ ಮಾದರಿಗಳು ಕೊಳೆತು ಹೋಗಿರುವುದರಿಂದ ಆ ವಸ್ತುವಿನ ತೀವ್ರತೆಯನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲ.
ಆಕೆಯ ಹೊಟ್ಟೆ, ಕರಳು, ಜಠರ, ಕಿಡ್ನಿ ಹಾಗೂ ಮೂತ್ರದಲ್ಲಿ ಒಂದೇ ರಾಸಾಯನಿಕ ಪತ್ತೆಯಾಗಿರುವುದರಿಂದ ಈ ವಸ್ತುವಿನಿಂದಲೇ ಆಕೆ ಮೃತಪಟ್ಟಿರುವುದನ್ನು ವರದಿ ಖಚಿತಪಡಿಸಿದೆ.
2014ರ ಜನವರಿಯಲ್ಲಿ ಪಂಚತಾರಾ ಹೋಟೆಲ್‌ನ ಸೂಟ್‌ನಲ್ಲಿ ಸುನಂದಾ ಮೃತದೇಹ ಪತ್ತೆಯಾಗಿತ್ತು. ಪಾಕಿಸ್ತಾನ ಮೂಲದ ಪತ್ರಕರ್ತೆ ಮೆಹ್ರ್ ತರರ್ ಜತೆ ಪತಿ ಹಾಗೂ ತಿರುವನಂತಪುರ ಸಂಸದ ಶಶಿ ತರೂರ್‌ಗೆ ಸಂಬಂಧವಿದೆ ಎಂಬ ಗುಮಾನಿಯಿಂದ ಟ್ವೀಟ್ ಸಮರ ನಡೆಸಿದ ಮರುದಿನವೇ ಸುನಂದಾ ಶವವಾಗಿದ್ದರು.
ಅವರ ಒಳಾಂಗಗಳ ಮಾದರಿಗಳನ್ನು ಕಳೆದ ಫೆಬ್ರವರಿಯಲ್ಲಿ ವಾಷಿಂಗ್ಟನ್‌ನ ಎಫ್‌ಐಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆಕೆಯ ಸಾವಿಗೆ ವಿಷಪ್ರಾಶನ ಕಾರಣ ಎಂದು ಎಐಐಎಂಎಸ್ ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟ ಬಳಿಕ ಯಾವ ಬಗೆಯ ವಿಷ ಎನ್ನುವುದನ್ನು ತಿಳಿಯಲು ಈ ಪರೀಕ್ಷೆಗೆ ಕಳುಹಿಸಲಾಗಿತ್ತು.
ಆದರೆ ಎಫ್‌ಐಬಿ ವರದಿ ಪೊಲೋನಿಯಂ ವಿಷಪ್ರಾಶನದಿಂದ ಆಕೆಯ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವರದಿಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ದೆಹಲಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ವೈದ್ಯಕೀಯ ಮಂಡಳಿಗೆ ಕಳುಹಿಸಲಾಗಿತ್ತು.







