ತೀವ್ರ ಅಸ್ವಸ್ಥರು ಕೃತಕ ಉಸಿರಾಟದಲ್ಲಿ ಬದುಕಬೇಕೇ? ಸುಪ್ರೀಂ ಪ್ರಶ್ನೆ

ನವದೆಹಲಿ: ಸಂಕೀರ್ಣ ಹಾಗೂ ಭಾವನಾತ್ಮಕ ದಯಾಮರಣ ವಿಷಯವನ್ನು ಮತ್ತೆ ಚರ್ಚೆಗೆ ತಂದಿರುವ ಸುಪ್ರೀಂಕೋರ್ಟ್ ಶುಕ್ರವಾರ, "ವೈದ್ಯಕೀಯ ಚಿಕಿತ್ಸೆ ವಿಫಲವಾದ ಬಳಿಕ ಕೊನೆಯ ಹಂತದಲ್ಲಿ ರೋಗಿಗಳ ಇಚ್ಛೆಗೆ ವಿರುದ್ಧವಾಗಿ ತೀವ್ರ ಅಸ್ವಸ್ಥರನ್ನು ಕೃತಕ ಉಸಿರಾಟದಲ್ಲಿ ಮುಂದುವರಿಸಬೇಕೇ" ಎಂದು ಕೇಂದ್ರವನ್ನು ಪ್ರಶ್ನಿಸಿದೆ.
"ರೋಗಿಯ ಇಚ್ಛೆಗೆ ವಿರುದ್ಧವಾಗಿ ಅವರ ಜೀವನವನ್ನು ಕೃತಕ ಉಸಿರಾಟ ಅಥವಾ ಜೀವರಕ್ಷಕ ವ್ಯವಸ್ಥೆಯಲ್ಲಿ ವಿಸ್ತರಿಸುವುದು ಅವರಿಗೆ ನೀಡುವ ಕಿರುಕುಳ ಹಾಗೂ ಕುಟುಂಬಕ್ಕೆ ಆರ್ಥಿಕ ಹೊರೆ" ಎಂದು ನ್ಯಾಯಮೂರ್ತಿಗಳಾದ ಎ.ಆರ್.ದವೆ, ಕುರಿಯನ್ ಜೋಸೆಫ್, ಎಸ್.ಕೆ.ಸಿಂಗ್, ಎ.ಕೆ.ಗೋಯಲ್ ಹಾಗೂ ಆರ್.ಎಫ್.ನಾರಿಮನ್ ಅವರನ್ನೊಳಗೊಂಡ ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ.
ಇದಕ್ಕೆ ಹೆಚ್ಚುವವರಿ ಸಾಲಿಸಿಟರ್ ಜನರಲ್ ಪಿ.ಎಸ್.ಪಟ್ವಾಲಿಯಾ ದನಿಗೂಡಿಸಿ, ಆಸ್ಪತ್ರೆಗಳಲ್ಲಿ ಈ ಭಾವನಾತ್ಮಕ ಕ್ಷಣಗಳನ್ನು ವ್ಯಾಪಾರಿ ದೃಷ್ಟಿಯಿಂದ ಶೋಷಣೆ ಮಾಡಲಾಗುತ್ತಿದೆ. ಕೃತಕ ಉಸಿರಾಟ ವ್ಯವಸ್ಥೆ ಈಗ ಲಾಭದಾಯಕ ದಂಧೆಯಾಗಿದೆ ಎಂದು ಹೇಳಿದರು.
ಈ ಬಗ್ಗೆ 15 ದಿನಗಳ ಒಳಗಾಗಿ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಲಾಗಿದೆ. ಒಬ್ಬ ವ್ಯಕ್ತಿ ಉತ್ತಮ ಮಾನಸಿಕ ಹಾಗೂ ದೈಹಿಕವಾಗಿ ಸಮರ್ಥವಾಗಿದ್ದಾಗ ಆತ, ಜೀವವ್ಯವಸ್ಥೆಯ ಬೆಂಬಲವಿಲ್ಲದೇ ತಾನು ಬದುಕಲು ಸಾಧ್ಯವಿಲ್ಲ ಎನ್ನುವುದು ಖಚಿತವಾದ ಸಂದರ್ಭದಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಮೂಲಕ ಜೀವನ ವಿಸ್ತರಿಸುವುದು ಬೇಡ ಎಂದು ಖಚಿತಪಡಿಸುವುದನ್ನು ಕಾನೂನುಬದ್ಧವಾಗಿಸಬೇಕು ಎಂಬ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕಾನೂನು ಆಯೋಗ ತನ್ನ 196 ಹಾಗೂ 241ನೇ ವರದಿಯನ್ನು ಕೇಂದ್ರ ಪರಿಶೀಲಿಸುತ್ತಿದೆ. ಇದರ ಪ್ರಕಾರ ನಿಷ್ಕ್ರಿಯ ದಯಾಮರಣ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತಂದಿರುವ ಕಾಮನ್ ಕಾಸ್ ಎಂಬ ಸ್ವಯಂಸೇವಾ ಸಂಸ್ಥೆಯ "ಜೀವದ ಇಚ್ಛೆ" ಪರಿಕಲ್ಪನೆಗೆ ಸಮಾನವಾಗಿದೆ ಎಂದು ಪಾಟಿವಾಲಾ ವಿವರಿಸಿದರು. ಎನ್‌ಜಿಓ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು.







