ಮೂಡುಬಿದಿರೆ : ಯೋಧ ಗಿರೀಶ್ ಪೂಜಾರಿ ಸ್ಮರಣಾರ್ಥ ವೃತ್ತ ಉದ್ಘಾಟನೆ

ಮೂಡುಬಿದಿರೆ: ರಾಜಸ್ಥಾನದ ಗಂಗಾನಗರದಲ್ಲಿ ಭಾರತೀಯ ಭೂಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನಿಧನರಾದ ಮಿಜಾರು ಉರ್ಕಿಪದವು ನಂದಾಡಿಮನೆಯ ನಿವಾಸಿ ಗಿರೀಶ್ ಪೂಜಾರಿ ಅವರ ಸಂಸ್ಮರಣಾರ್ಥ ವೃತ್ತ ಉದ್ಘಾಟನೆ ಉರ್ಕಿಪದವಿನಲ್ಲಿ ಶನಿವಾರ ಸಂಜೆ ನಡೆಯಿತು. ಗಿರೀಶ್ ಪೂಜಾರಿ ಅವರ ಮಾವ ಹೈದರಾಬಾದಿನ ಶೇಖರ ಪೂಜಾರಿ ವೃತ್ತವನ್ನು ಉದ್ಘಾಟಿಸಿದರು.
ದ.ಕ ಜಿಲ್ಲಾ ಮಾಜಿ ಸೈನಿಕರ ಸಂಘದ ಜತೆಕಾರ್ಯದರ್ಶಿ ಭಗವಾನ್‌ದಾಸ್ ಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿ, ಒಗ್ಗಟ್ಟಿನ ಫಲವಾಗಿ ಯೋಧನ ಸ್ಮರಣೆ ಚಿರಕಾಲ ಉಳಿಯುವಂತಾಗಿದೆ. ಗಿರೀಶ್ ಅವರ ಆದರ್ಶದ ಬಗ್ಗೆ ಅಭಿಮಾನವಿದೆ. ಸರ್ಕಾರವು ಮಾಜಿ ಸೈನಿಕರನ್ನು ಕಡೆಗಣಿಸುತ್ತಿದ್ದರೂ, ಊರವರು ಸೈನಿಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ಗಿರೀಶ್ ಪೂಜಾರಿ ಅವರ ಉತ್ತರ ಕ್ರಿಯೆಯ ದಿನವಾದ ಶನಿವಾರ ನಾಗರಿಕ ಹಿತರಕ್ಷಣಾ ವೇದಿಕೆಯ ಮುತುವರ್ಜಿಯಲ್ಲಿ ಗಿರೀಶ್ ಅವರ ಮನೆಯ ಅನತಿ ದೂರದಲ್ಲಿನ ಉರ್ಕಿಪದವು ಜಂಕ್ಷನ್‌ನಲ್ಲಿ ಹವಾಲ್ದಾರ್ ಗಿರೀಶ್ ಪೂಜಾರಿ’ ವೃತ್ತವನ್ನು ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸ್ಥಳದಲ್ಲಿ ಆಕರ್ಷಕ ವೃತ್ತವನ್ನು ನಿರ್ಮಾಣ ಮಾಡಲಾಗುವುದು ಎಂದು ವೇದಿಕೆಯ ಉಪಾಧ್ಯಕ್ಷ ಸುಧಾಕರ ಪೂಂಜ ಹೇಳಿದರು.
ವೇದಿಕೆಯ ಅಧ್ಯಕ್ಷ ಸುದರ್ಶನ ಪೂಂಜ, ಬಡಗ ಎಡಪದವು ಗ್ರಾ.ಪಂ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷ ಹರೀಶ್, ಸದಸ್ಯ ಚಂದ್ರಹಾಸ,ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ನಾಗರಿಕ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ಸುಧಾಕರ ಪೂಂಜ, ಗಿರೀಶ್ ಪೂಜಾರಿಯವರ ಪುತ್ರ ಮಾ.ಗಗನ್, ಸಹೋದರರಾದ ಉಮೇಶ್ ಪೂಜಾರಿ, ಪದ್ಮನಾಭ ಪೂಜಾರಿ, ಬಿಜೆಪಿ ಮುಖಂಡರಾದ ರಂಜಿತ್ ಪೂಜಾರಿ ಸಹಿತ ಗಿರೀಶ್ ಪೂಜಾರಿಯವರ ಬಂಧುಮಿತ್ರರು ಉಪಸ್ಥಿತರಿದ್ದರು.





