ಜಿಲ್ಲೆಗೊಂದು ವಿಕಲಚೇತನ ಭವನ:ಕೆ. ಎಸ್. ರಾಜಣ್ಣ

ಮಂಗಳೂರು ಜ.16: ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಿಕಲಚೇತನ ಭವನ ನಿರ್ಮಾಣ ಮಾಡಲು ಚಿಂತಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಕಲಚೇತನ ಭವನ ಸ್ಥಾಪಿಸಲು ಹತ್ತು ಎಕರೆ ಜಾಗ ಗುರುತಿಸುವಂತೆ ರಾಜ್ಯ ವಿಕಲಚೇತನ ಇಲಾಖೆಯ ಆಯುಕ್ತ ಕೆ. ಎಸ್. ರಾಜಣ್ಣ ದ.ಕ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ಜಿಲ್ಲೆಗೂ ವಿಕಲಚೇತನ ಭವನಕ್ಕೆ ಎರಡು ಕೋಟಿ ರೂಪಾಯಿ ನೀಡಲಾಗುವುದು. ವಿಕಲಚೇತನಭವನದಲ್ಲಿ ಎಲ್ಲಾ ಸೌಕರ್ಯಗಳಿದ್ದು ಇಲ್ಲಿ ಗ್ರಾಮೀಣ ಭಾಗದಿಂದ ಬರುವ ವಿಕಲಚೇತನರಿಗೆ ತಂಗಲು ವಸತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಎಲ್ಲಾ ಸರಕಾರಿ ಕಚೇರಿಗಳಲ್ಲೂ ವಿಕಲಚೇತನ ಸ್ನೇಹಿ ವ್ಯವಸ್ಥೆಗಳು ಇರಬೇಕು. ಸರಕಾರಿ ಕಚೇರಿಗಳಲ್ಲಿ ವಿಕಲಚೇತನರಿಗಾಗಿ ರ್ಯಾಂಪ್‌ಗಳ ನಿರ್ಮಾಣವಾಗಬೇಕು. ವಿಕಲಚೇತನರು ಇರುವ ಮನೆಗಳನ್ನು ಗುರುತಿಸಿ ಅವರಿಗೆ ಸರಕಾರದ ನಿಧಿಯನ್ನು ಬಳಸಿ ವಿಕಲಚೇತನ ಸ್ನೇಹಿ ಶೌಚಾಲಯವನ್ನು ನಿರ್ಮಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ .ಬಿ. ಇಬ್ರಾಹೀಂ ಜಿಲ್ಲೆಯಲ್ಲಿ ಮೂರು ಸಾವಿರ ಎಂಡೋಸಲ್ಪಾನ್ ಪೀಡಿತರಿಗೆ ಕಳೆದ ವರ್ಷದಿಂದ ಮಾಸಶನ ನೀಡಲಾಗುತ್ತಿದೆ. ಸರಕಾರಿ ಕಚೇರಿಗಳಲ್ಲಿ ರ್ಯಾಂಪ್ ನಿರ್ಮಾಣ ಮಾಡಡೆ ಇರುವವರ ವಿರುದ್ದ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ ಮುಖ್ಯ ಸಿಇಓ ಪಿ.ಐ.ಶ್ರೀವಿದ್ಯಾ ಉಪಸ್ಥಿತರಿದ್ದರು.
ಕುಂಬ್ರ ಶಾಲೆಯಲ್ಲಿ ದೃಷ್ಟಿ ಅಂಗವೈಕಲ್ಯತೆ ಹೊಂದಿರುವ ಶಿವಪ್ಪ ರಾಥೋಡ್ ಎಂಬ ಶಿಕ್ಷಕರೊಬ್ಬರು ತಮಗೆ ಸಹ ಶಿಕ್ಷಕಿ ಮತ್ತು ಆಕೆಯ ಪತಿ ಮಾನಸಿಕ ಕಿರುಕುಳ ನೀಡುತ್ತಿರುವ ಮತ್ತು ಶಾಲೆಯೊಳಗಿನ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿರುವ ಬಗ್ಗೆ ದೂರನ್ನು ಆಲಿಸಿದರು. ಈ ಬಗ್ಗೆ ಶಿಕ್ಷಣಾಧಿಕಾರಿ ಕಿರುಕುಳ ನೀಡಿರುವ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಹದಿನೈದು ದಿನದಲ್ಲಿ ತನಿಖೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.














