ಬೈಕ್ ಕಳವು ಪ್ರಕರಣ: ನಾಲ್ವರ ಬಂಧನ

ಕುಂದಾಪುರ, ಜ.16: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಡಿಸಿಐಬಿ ಪೊಲೀಸರು ಜ.16ರಂದು ಬಂಧಿಸಿದ್ದಾರೆ.
ಕುಂದಾಪುರದ ಸುಜನ(19), ನೇರಳಕಟ್ಟೆಯ ರವೀಂದ್ರ ಕುಮಾರ್(19), ಶಿರೂರಿನ ವಿಷ್ಣು ಮೇಸ್ತ(20) ಹಾಗೂ ಜಯರಾಜ್ ಮೇಸ್ತ(24) ಎಂಬವರು ಬಂಧಿತ ಆರೋಪಿಗಳು. ಇವರಿಂದ ಕಳವು ಮಾಡಿದ್ದ ಎರಡು ಯಮಹಾ ಮತ್ತು ಒಂದು ಸ್ಪ್ಲೆಂಡರ್ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,60,000ರೂ. ಎಂದು ಅಂದಾಜಿಸಲಾಗಿದೆ.
ಉಡುಪಿಯ ಬಲಾಯಿಪಾದೆ ಬಳಿ, ಕುಂದಾಪುರ ಬಸ್ರೂರು ಮಾರ್ಗೊಳಿ ಬಳಿ, ಕೋಟೇಶ್ವರ ಮಾರ್ಕೋಡು ಜನತಾ ನಗರದಲ್ಲಿ ಬೈಕ್ ಸವಾರರು ಪೆಟ್ರೋಲ್ ಖಾಲಿಯಾದ ಕಾರಣಕ್ಕೆ ನಿಲ್ಲಿಸಿದ್ದ ಬೈಕ್‌ಗಳಿಗೆ ಇವರು ತಮ್ಮಲ್ಲಿದ್ದ ಪೆಟ್ರೋಲ್ ಹಾಕಿ ಬೈಕ್ ಕಳವು ಮಾಡುತ್ತಿದ್ದರು. ಇವರು ಮೋಜಿಗಾಗಿ ಬೈಕನ್ನು ಕಳವು ಮಾಡಿ ಬಳಸುತ್ತಿದ್ದರೆನ್ನಲಾಗಿದೆ. ಆರೋಪಿಗಳನ್ನು ಮುಂದಿನ ಕ್ರಮದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಡಿಸಿಐಬಿ ಇನ್‌ಸ್ಪೆಕ್ಟರ್ ಟಿ.ಆರ್.ಜೈಶಂಕರ್, ಕೋಟ ಠಾಣಾಧಿಕಾರಿ ಕಬ್ಬಾಳ್ ರಾಜ್, ಡಿಸಿಐಬಿ ಎಎಸ್ಸೈ ರೊಸಾರಿಯೊ ಡಿಸೋಜ, ಸಿಬ್ಬಂದಿಯರಾದ ರವಿಚಂದ್ರ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ ಕೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ ಪೂಜಾರಿ, ದಯಾನಂದ ಪ್ರಭು, ಕೋಟ ಠಾಣಾ ಸಿಬ್ಬಂದಿಯರಾದ ಗೋಪಾಲ, ಸುರೇಶ, ಸಂದೀಪ್, ನವೀನ್‌ಚಂದ್ರ, ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.





