ರಾಜ್ಯಾದ್ಯಂತ ಪೋಲಿಯೊ ಅಭಿಯಾನಕ್ಕೆ ಇಂದು ಚಾಲನೆ: ಸಚಿವ ಖಾದರ್

ಬೆಂಗಳೂರು, ಜ.16: ರಾಜ್ಯಾದ್ಯಂತ 74.25 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಅಭಿಯಾನಕ್ಕೆ ರವಿವಾರ ಬೆಳಗ್ಗೆ 8 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಜ.17 ಹಾಗೂ ಫೆ.21ರಂದು ಎರಡು ಸುತ್ತುಗಳಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸ ಲಾಗಿದ್ದು , 5 ವರ್ಷದೊಳಗಿನ 74.25 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲೆಡೆ 32,617 ಬೂತ್‌ಗಳಲ್ಲಿ 12.34 ಲಕ್ಷ ಸಿಬ್ಬಂದಿ ಲಸಿಕೆಗಳನ್ನು ಹಾಕಲಿದ್ದಾರೆ. 1205 ಸಂಚಾರಿ ತಂಡಗಳನ್ನು ಈ ಅಭಿಯಾನಕ್ಕೆ ಸಿದ್ಧಗೊಳಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಳಿ ತೆರಳಿ ಅಲ್ಲಿನ ಮಕ್ಕಳಿಗೂ ಲಸಿಕೆಯನ್ನು ಹಾಕಲಾಗುವುದು ಎಂದು ಖಾದರ್ ತಿಳಿಸಿದರು.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆ ಪ್ರದೇಶಗಳು, ವಿಮಾನ ನಿಲ್ದಾಣಗಳ ಬಳಿಯೂ ಲಸಿಕಾ ತಂಡಗಳು ಕಾರ್ಯನಿರ್ವಹಿಸಲಿವೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಲಸಿಕಾ ಅಭಿಯಾನ ನಡೆಯಲಿದ್ದು, ಎಲ್ಲ ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪೋಲಿಯೊ ಪ್ರಕರಣ ವರದಿಯಾಗಬಾರದು ಎಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಪಡುತ್ತಿದ್ದೇವೆ. ವಿಶ್ವ ಸಂಸ್ಥೆಯು ಭಾರತವನ್ನು ‘ಪೋಲಿಯೊ ಮುಕ್ತ ದೇಶ’ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಖಾದರ್ ಹೇಳಿದರು.
108 ಆ್ಯಂಬುಲೆನ್ಸ್ ಸಿಬ್ಬಂದಿ ಪ್ರತಿಭಟನೆ: ಆರೋಗ್ಯ ಕವಚಾ 108 ಆ್ಯಂಬುಲೆನ್ಸ್ ಸಿಬ್ಬಂದಿ ಪದೇ ಪದೇ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಗಳನ್ನು ನಡೆಸುವುದು ಸರಿಯಲ್ಲ. ಜಿವಿಕೆ ಸಂಸ್ಥೆಯವರು ಚಾಲಕರ ವರ್ತನೆ ಬಗ್ಗೆ ನಿಗಾ ವಹಿಸುವುದಲ್ಲದೆ, ಅವರಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಎಂದು ಖಾದರ್ ಹೇಳಿದರು.





