ಹನಿಟ್ರಾಪ್ ತಡೆಗೆ ಮುನ್ನೆಚ್ಚರಿಕೆ ಕ್ರಮ: ಪಾರಿಕ್ಕರ್
ಜೈಪುರ,ಜ.16: ವಾಯುಪಡೆಯ ಅಧಿಕಾರಿಯೊಬ್ಬರು ‘ಹನಿಟ್ರಾಪ್’ ಜಾಲಕ್ಕೆ ಸಿಲುಕಿಕೊಂಡ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ, ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳ ಲಾಗುವುದೆಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ತಿಳಿಸಿದ್ದಾರೆ.
ಜೈಪುರ ಸಮೀಪದ ಆ್ಯಂಬರ್‌ನಲ್ಲಿ ಶನಿವಾರ ನಡೆದ ಸೇನಾ ನೇಮಕಾತಿ ರ್ಯಾಲಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ ಹನಿಟ್ರಾಪ್’’ ಮೂಲಕ ಬೇಹುಗಾರಿಕೆ ಮಾಹಿತಿ ಸಂಗ್ರಹಿಸುವುದು ಉನ್ನತ ಮಟ್ಟದಲ್ಲಿಯೂ ಇದೆಯೆಂದು ನಾನು ಭಾವಿಸುವುದಿಲ್ಲ. ಇಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆಯಾದರೂ,ಅವುಗಳನ್ನು ತಡೆಗಟ್ಟಲು ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ’’ ಎಂದರು. ಸೇನಾಧಿಕಾರಿಗಳ ನೇಮಕ ಹಾಗೂ ತರಬೇತಿಯ ಸಂದರ್ಭದಲ್ಲೂ ಈ ಬಗ್ಗೆ ಜಾಗ್ರತೆ ವಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಹೇಗೆ ನಿರ್ವಹಿಸಬೇಕೆಂಬ ಬಗ್ಗೆ ಸೇನಾಸಿಬ್ಬಂದಿಗೆ ಸ್ಪಷ್ಟವಾದ ಮಾರ್ಗದರ್ಶಿ ಸೂತ್ರಗಳು ಹಾಗೂ ನೀತಿ ಸಂಹಿತೆ ಜಾರಿಯಲ್ಲಿದೆಯೆಂದರು.
ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು, ಶಂಕಿತ ಗುಪ್ತಚಾರಿಣಿ ಯೊಬ್ಬಳಿಗೆ ವರ್ಗಾಯಿಸಿದ ಆರೋಪ ದಲ್ಲಿ ಇತ್ತೀಚೆಗೆ 30 ವರ್ಷ ವಯಸ್ಸಿನ ವಾಯುಪಡೆ ಅಧಿಕಾರಿ ರಂಜಿತ್ ಕೆ.ಕೆ. ಎಂಬಾತನನ್ನು ಸೇವೆಯಿಂದ ಅಮಾನತುಗೊಳಿಸಿ, ಬಂಧಿಸಲಾಗಿತ್ತು. ಈ ಗುಪ್ತಚಾರಿಣಿಯು, ಫೇಸ್‌ಬುಕ್‌ನಲ್ಲಿ ಪತ್ರಕರ್ತೆ ದಾಮಿನಿ ಮ್ಯಾಕ್‌ನಾಟ್ ಎಂಬ ಸೋಗಿನಲ್ಲಿ ರಂಜಿತ್‌ಗೆ ಪರಿಚಯವಾಗಿದ್ದಳು.





