ಅಂತ್ಯಕ್ರಿಯೆಗೆ ಆಹ್ವಾನಿಸಿ ಆತ್ಮಹತ್ಯೆ ಮಾಡಿಕೊಂಡ ಮಹಾರಾಷ್ಟ್ರದ ರೈತ!
ಮುಂಬೈ, ಜ.16: ಮರಾಠವಾಡ ಪ್ರದೇಶದ ಜಾಲ್ನಾ ಜಿಲ್ಲೆಯ ಸಾಲ ಪೀಡಿತ 40ರ ಹರೆಯದ ರೈತನೊಬ್ಬನು ‘ತನ್ನ ಅಂತ್ಯೇಷ್ಟಿಗೆ’ ಬರುವಂತೆ ತನ್ನ ಗ್ರಾಮದ ಜನರನ್ನು ಆಹಾನಿಸುತ್ತ ಹೋದಾಗ, ಆವರದನ್ನು ವಿನೋದವೆಂದೇ ಭಾವಿಸಿದ್ದರು.
ಆದರೆ, ಮರುದಿನ ಶೇಷರಾವ್ ಸೆಜುಲ್ ಎಂಬ ರೈತ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಗಲಷ್ಟೇ ಅವರ ಕುಟುಂಬ ಸದಸ್ಯರು ಹಾಗೂ ಇತರ ಜನರಿಗೆ ಅವರ ಉದ್ದೇಶದ ಗಂಭೀರತೆ ಅರಿವಾದುದು.
‘‘ಶೇಷರಾವ್, ತಾನು ನಿಮ್ಮನ್ನು ಅಗಲಲಿದ್ದೇನೆ ಎಂದು ನನ್ನಲ್ಲಿ ಹಾಗೂ ಇತರ ಅನೇಕ ಗ್ರಾಮಸ್ಥರಲ್ಲಿ ಹೇಳಿ, ಎಲ್ಲ ಗ್ರಾಮಸ್ಥರನ್ನು ಅಂತ್ಯಕ್ರಿಯೆಗೆ ಆಹ್ವಾನಿಸಿದ್ದರು. ಆದರೆ, ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮರುದಿನ ಮುಂಜಾನೆ ಅವರ ಮೃತದೇಹ ಬೇವಿನ ಮರವೊಂದರಲ್ಲಿ ತೂಗಾಡುತ್ತಿದ್ದುದನ್ನು ನಾವು ಕಂಡೆವು’’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಶೇಷರಾವ್‌ಗೆ 2 ಎಕ್ರೆ ಜಮೀನಿತ್ತು. ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ತೀವ್ರ ಕ್ಷಾಮದಿಂದಾಗಿ ಅವರು ಬೆಳೆದಿದ್ದ ಸೋಯಾಬೀನ್ ಬೆಳೆ ವಿಫಲವಾಗಿತ್ತು. ತನ್ನ ಮಗಳ ಮದುವೆಗೆ ಹೇಗೆ ಹಣದ ವ್ಯವಸ್ಥೆ ಮಾಡುವುದೆಂಬ ಚಿಂತೆಯೂ ಅವರಿಗಿತ್ತು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿದೇಶಿ ನೇರ ಹೂಡಿಕೆಯ ಲಾಭವನ್ನು ಗಟ್ಟಿಗೊಳಿಸಲು ಮುಂದಿನ ತಿಂಗಳು ನಡೆಯುವ ‘ಮೇಕ್ ಇನ್ ಇಂಡಿಯಾ ಸಪ್ತಾಹ’ದ ಮೇಲೆ ಬಂಡವಾಳ ಹೂಡಲು ಯೋಜನೆ ಹಾಕಿದ್ದರು.
ಶೇಷರಾವ್ ಅವರ ಆಹ್ವಾನ ಮಂತ್ರಾಲಯವನ್ನು ತಲುಪಿತ್ತೇ? ರಾಜ್ಯದಲ್ಲಿ ಇಂತಹ ಘಟನೆಗಳು ಮುಂದುವರಿದರೆ, ಅದನ್ನು ತಾವು ‘ಮೇಕ್ ಇನ್ ಮಹಾರಾಷ್ಟ್ರ’ ಎಂದು ಕರೆಯಬೇಕಾಗುತ್ತದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಇಂದಿನ ಸಂಪಾದಕೀಯ ಟೀಕಿಸಿದೆ.
ಶೇಷ ರಾವ್ ಹಾಗೂ ಅವರಂತಹ ಸಾವಿರಾರು ರೈತರ ಆತ್ಮಹತ್ಯೆಗಳನ್ನು ‘ಮೇಕ್ ಇನ್ ಮಹಾರಾಷ್ಟ್ರದ’ ಉತ್ಪನ್ನ ಎಂದು ಕರೆಯಬೇಕಾಗುತ್ತದೆಂದು ಅದು ಹೇಳಿದೆ.





