ಫೆಲೆಸ್ತೀನ್ ಫ್ರೀಡಂ ಜಾಥಾ ಸಮಾರೋಪ
ಬೆಂಗಳೂರು, ಜ.16: ಇಸ್ರೇಲ್ ಆಕ್ರಮಣಕಾರರಿಂದ ಫೆಲೆಸ್ತೀನ್ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟಕ್ಕೆ ಗಡಿ ಭಾಷೆ ಧರ್ಮಗಳ ಹಂಗಿಲ್ಲದೆ ಬೆಂಬಲ ವ್ಯಕ್ತವಾಗುತ್ತಿದೆ ಎಂದು ‘ದಿ ಫ್ರೀಡಂ ಥಿಯೇಟರ್ ಫೆಲೆಸ್ತೀನ್’ನ ಮುಖಂಡ ಫೈಝಲ್ ಅಬು ಅಲ್ಯಾಜಾ ಅಭಿಪ್ರಾಯಿ ಸಿದ್ದಾರೆ.
ಫೆಲೆಸ್ತೀನ್ ಫ್ರೀಡಂ ಜಾಥಾದ ಕೊನೆಯ ದಿನವಾದ್ದರಿಂದ ಇಂದು ನಗರದ ಬಾದಾಮಿ ಹೌಸ್‌ನಲ್ಲಿ ಆಯೋಜಿಸಿದ್ದ ‘ಫೆಲೆಸ್ತೀನ್ ಸುತ್ತ ಮುತ್ತ ಮಾತುಕತೆ’ ಕಾರ್ಯಕ್ರಮದಲ್ಲಿ ‘ರೋಷದ ಬಣ್ಣಗಳು’ ಹಾಗೂ ‘ಫೆಲೆಸ್ತೀನ್ ಪ್ರಶ್ನೆ ನಿಮಗೆ ತಿಳಿದಿರಲಿ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಫೆಲೆಸ್ತೀನ್ ಜನತೆ ತಮ್ಮ ಜನ್ಮ ಭೂಮಿಯನ್ನು ಕಳೆದುಕೊಂಡು ನೆಲೆಸಲು ಸ್ಥಳಗಳಿಲ್ಲದೆ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದೆ. ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ಆಕ್ರಮಣಕಾರರು ನಮ್ಮ ನೆಲದ ಬಹುಭಾಗ ವನ್ನು ಕಸಿದುಕೊಂಡಿದ್ದಾರೆ. ಈಗ ನಮಗೆ ಉಳಿದಿರು ವುದು ಕೇವಲ ಶೇ.13ರಷ್ಟು ಭೂ ಭಾಗ ಮಾತ್ರ. ನೆಲೆ ಉಳಿಸಿಕೊಳ್ಳಲು ನಿರಂತರವಾದ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸಾಂಸ್ಕೃತಿಕ ಹೋರಾಟ:
1987ರಿಂದಲೂ ರಾಜಕೀ ಯವಾಗಿ ಹಲವು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಈ ಹೋರಾಟದಲ್ಲಿ ಮಕ್ಕಳು, ತಾಯಂದಿರು, ಅಣ್ಣ, ತಮ್ಮಂದಿರನ್ನು ಕಳೆದು ಕೊಂಡಿದ್ದೇವೆ. ಈ ಹೋರಾಟದ ಜೊತೆಗೆ ಸಾಂಸ್ಕೃತಿಕ ಹೋರಾಟವನ್ನು ನಡೆಸಲು ಯುವ ಜನತೆ ಸಿದ್ಧ ಗೊಂಡಿದ್ದು, ಹಾಡು, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನರನ್ನು ಜಾಗೃತಗೊಳಿಸಿ ಸ್ವಾತಂತ್ರವನ್ನು ಪಡೆಯಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.
ಇಸ್ರೇಲ್ ಯುದ್ಧ ವಿಮಾನಗಳು ಫೆಲೆಸ್ತೀನ್ ಭೂ ಭಾಗಗಳ ಮೇಲೆ ನಿರಂತರವಾದ ಬಾಂಬ್ ದಾಳಿ ನಡೆಸುತ್ತಿವೆ. ಇದರಿಂದಾಗಿ ಫೆಲೆಸ್ತೀನ್ ಜನತೆ ಆತಂಕದಲ್ಲೇ ಜೀವನ ನಡೆಸುವಂತಾಗಿದೆ. ಇಸ್ರೇಲ್‌ನ ಈ ದಾಳಿಗಳನ್ನು ತಡೆಯಲಿಕ್ಕಾಗಿ ಹಾಗೂ ಫೆಲೆಸ್ತೀನ್ ಜನತೆಯಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲಿಕ್ಕಾಗಿ ಚಳವಳಿಯನ್ನು ಹಮ್ಮಿಕೊಂಡಿದ್ದೇವೆ. ನಮ್ಮ ಚಳವಳಿಗೆ ವಿಶ್ವಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಫೈಝಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜನ ನಾಟ್ಯ ಮಂಚ್‌ನ ಸುಧನ್ವ ದೇಶಪಾಂಡೆ, ಮಂಚ್‌ನ ಮಾಲಾಶ್ರೀ, ಸಮುದಾಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಕೆ.ಪ್ರಕಾಶ್, ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ್, ಬಿ.ಆರ್.ಮಂಜುನಾಥ, ಎನ್.ವಿದ್ಯಾಶಂಕರ್, ಜನವಾದಿ ಮಹಿಳಾ ಸಂಘಟನೆಯ ವಿಮಲಾ, ಕೆ.ಎಸ್.ಲಕ್ಷ್ಮೀ, ಅಮಾನುಲ್ಲಾ ಖಾನ್, ಆರ್.ವಿ. ಆಚಾರಿ, ಶ್ರೀನಿವಾಸ್ ಜಿ.ಕಣ್ಣಪ್ಪ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ರಾಜಶೇಖರ್‌ಮೂರ್ತಿ, ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜ್ ದೇಸಾಯಿ ಉಪಸ್ಥಿತರಿದ್ದರು.







