ಐಸಿಸ್ ಪ್ರಭಾವ ಹತ್ತಿಕ್ಕಲು ರಾಜ್‌ನಾಥ್ ನೇತೃತ್ವದಲ್ಲಿ ಉನ್ನತ ಸಭೆ
ಹೊಸದಿಲ್ಲಿ,ಜ.16: ಕೇಂದ್ರ ಗುಪ್ತ ಚರದಳ ಹಾಗೂ ತನಿಖಾ ಏಜೆನ್ಸಿ ಗಳು ಮತ್ತು 13 ರಾಜ್ಯಗಳ ಪೊಲೀಸ್ ಅಧಿಕಾರಿಗಳು, ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಿ, ಸಾಮಾಜಿಕ ಜಾಲತಾಣಗಳು ಮತ್ತಿತರ ಮೂಲ ಗಳ ಮೂಲಕ ಯುವಜನತೆಯ ಮೇಲೆ ಭಯೋತ್ಪಾದಕ ಸಂಘಟನೆ ಐಸಿಸ್‌ನ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಚರ್ಚಿಸಿದರು. ಕೆಲವು ಭಾರತೀಯ ಯುವಕರು ಐಸಿಸ್‌ನತ್ತ ಆಕರ್ಷಿತರಾಗುತ್ತಿರುವುದರಿಂದ, ಉಂಟಾಗಿರುವ ಪರಿಸ್ಥಿತಿ ಹಾಗೂ ಅದನ್ನು ಎದುರಿಸುವುದು ಹೇಗೆಂಬುದನ್ನು ಪರಾಮರ್ಶಿಸಲು ಸಿಂಗ್ ಈ ಸಭೆಯನ್ನು ಕರೆದಿದ್ದರು.
ಆನಂತರ ಕೇಂದ್ರ ಗೃಹ ಸಚಿವಾಲಯದ ವಕ್ತಾರ ರೊಬ್ಬರು, ಸುದ್ದಿಗಾರರ ಜೊತೆ ಮಾತನಾಡುತ್ತಾ, ಐಸಿಸ್ ಪ್ರಭಾವವನ್ನು ಹತ್ತಿಕ್ಕಲು ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತೆಂದು ತಿಳಿಸಿದರು. ಅಲ್ಪಸಂಖ್ಯಾತರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವುದು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಿರಿಸವುದು ಹಾಗೂ ರಾಜ್ಯಗಳ ಪೊಲೀಸ್ ಇಲಾಖೆಗಳ ಸಾಮರ್ಥ್ಯವನ್ನು ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಯಿತೆಂದವರು ತಿಳಿಸಿದರು.
ಭಾರತದಲ್ಲಿ ಐಸಿಸ್ ಪ್ರಭಾವ ಬೆಳೆಯಲು ಸಾಧ್ಯವಿಲ್ಲ. ಭಾರತೀಯ ಪರಂಪರೆ ಹಾಗೂ ಕೌಟುಂಬಿಕ ವೌಲ್ಯಗಳು, ಐಸಿಎಸ್ ಪಿಡುಗಿನ ವಿರುದ್ಧ ಮೇಲುಗೈ ಸಾಧಿಸಲಿದೆಯೆಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ, ಭಾರತದಲ್ಲಿ ಐಸಿಸ್ ಪ್ರಭಾವ ಅತ್ಯಂತ ನಗಣ್ಯವಾಗಿದೆಯೆಂದವರು ಹೇಳಿದರು. ಆದಾಗ್ಯೂ, ಎಲ್ಲಾ ರಂಗಗಳಲ್ಲೂ ಐಸಿಸ್ ಬಗ್ಗೆ ತೀವ್ರ ಕಣ್ಗಾವಲಿನ ಅಗತ್ಯವಿದೆ ಯೆಂದರು. ಭಾರತದಲ್ಲಿ ಭಾರೀ ಸಂಖ್ಯೆಯ ಜನರು ಹಾಗೂ ಅನೇಕ ಭಾರತೀಯ ಮುಸ್ಲಿಮ್ ಸಂಘಟನೆಗಳು ಐಸಿಸ್‌ನ್ನು ಬಹಿರಂಗವಾಗಿ ವಿರೋಧಿಸಿ ದ್ದಾರೆಂದು ಸಿಂಗ್ ಹೇಳಿದರು.
ಇಂದು ನಡೆದ ಸಭೆಯಲ್ಲಿ ಉತ್ತರಪ್ರದೇಶ,ಕೇರಳ,ಜಮ್ಮುಕಾಶ್ಮೀರ, ಆಂಧ್ರಪ್ರದೇಶ, ತೆಲಂಗಾಣ,ಬಿಹಾರ, ತಮಿಳುನಾಡು, ಪ.ಬಂಗಾಳ, ಅಸ್ಸಾಂ, ಕರ್ನಾಟಕ, ಮಧ್ಯಪ್ರದೇಶ, ದಿಲ್ಲಿ ಹಾಗೂ ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಗುಪ್ತಚರ ಸಂಸ್ಥೆಗಳ ಪ್ರಕಾರ, ಈವರೆಗೆ 23 ಭಾರತೀಯರು ಐಸಿಸ್‌ಗೆ ಸೇರ್ಪಡೆಗೊಂಡಿದ್ದು, ಅವರಲ್ಲಿ ಆರು ಮಂದಿ ವಿವಿಧ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಐಸಿಸ್ ಜೊತೆ ಆನ್‌ಲೈನ್‌ನಲ್ಲಿ ಸಂಪರ್ಕವಿಟ್ಟುಕೊಂಡಿದ್ದಾರೆನ್ನಲಾದ 150 ಮಂದಿ ಭಾರತೀಯರ ಮೇಲೆ ಗುಪ್ತಚರ ಇಲಾಖೆಗಳು ಕಣ್ಗಾವಲಿರಿಸಿವೆ.





