ಸ್ಟಾರ್ಟ್-ಅಪ್‌ಗಳಿಗೆ ಹೊಸ ತೆರಿಗೆ ವ್ಯವಸ್ಥೆ

ಹೊಸದಿಲ್ಲಿ, ಜ.16: ಬೃಹತ್ ಕಂಪೆನಿಗಳಿಗಿ ರುವ ನಿಯಂತ್ರಣ ವ್ಯವಸ್ಥೆಯಿಂದ ‘ಸ್ಟಾರ್ಟ್-ಅಪ್’ಗಳನ್ನು ವಿಮುಕ್ತಿಗೊಳಿಸುವ ಉದ್ದೇಶದಿಂದ ಅವುಗಳಿಗಾಗಿಯೇ ಹೊಸ ತೆರಿಗೆ ವ್ಯವಸ್ಥೆ ಯೊಂದನ್ನು ಜಾರಿಗೊಳಿಸಲಾಗುವುದೆಂದು ಶನಿವಾರ ಸರಕಾರ ಹೇಳಿದೆ.
‘ಸ್ಟಾರ್ಟ್-ಅಪ್ ಇಂಡಿಯಾ’ ಕಾರ್ಯಕ್ರಮದ ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕೆಲವು ಹೊಸ ತೆರಿಗೆ ನಿಯಮಗಳನ್ನು ಕಾರ್ಯಕಾರಿ ಆದೇಶಗಳ ಮೂಲಕ ಘೋಷಿಸಲಾಗುವುದು. ಅವುಗಳಲ್ಲಿ ಕೆಲವನ್ನು ಬಜೆಟ್‌ನಲ್ಲಿ ಮಾಡಲಾಗುವುದು ಎಂದರು.
ಸ್ಟಾರ್ಟ್-ಅಪ್ ಅರ್ಥ ವ್ಯವಸ್ಥೆಯ ಉತ್ತೇಜನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹತ್ತು ಸಾವಿರ ಕೋಟಿ ರೂ. ನೆರವನ್ನು ಘೋಷಿಸಿದ್ದಾರೆ. ಸ್ಟಾರ್ಟ್-ಅಪ್‌ಗಳಿಗೆ ಸರಕಾರದಿಂದ ಸಂಪೂರ್ಣ ಸ್ವಾತಂತ್ರ ನೀಡಲು ಸರಕಾರವು ವ್ಯವಸ್ಥೆಯೊಂದನ್ನು ಪರಿಶೀಲಿಸುತ್ತಿದೆಯೆಂದು ಉದ್ಯಮಿಗಳ ಸಭೆಯಲ್ಲಿ ಜೇಟ್ಲಿ ಹೇಳಿದರು.
ಇಡೀ ದಿನ ನಡೆಯಲಿರುವ ‘ಸ್ಟಾರ್ಟ್-ಅಪ್ ಇಂಡಿಯಾ’ ಕಾರ್ಯಕ್ರಮಕ್ಕಾಗಿ ಉದ್ಯಮಿಗಳು ತಾಸಿಗೂ ಮೊದಲೇ ವಿಜ್ಞಾನಭವನದ ಹೊರಗೆ ಸಾಲುಗಟ್ಟಿದ್ದರು.
ಒಮ್ಮೆ ಸ್ಟಾಟ್-ಅಪ್ ಚಳವಳಿಯು ವೇಗ ಪಡೆದರೆ, ಅದು ಸರಕಾರದಿಂದ ಸ್ವಾತಂತ್ರವನ್ನು ಪಡೆಯಲಿದೆ. ಸರಕಾರದ ಪಾತ್ರವು ಕೇವಲ ಅನುಕೂಲ ಕಲ್ಪಿಸುವುದಷ್ಟೇ ಆಗಲಿದೆಯೆಂದು ಜೇಟ್ಲಿ ತಿಳಿಸಿದರು.
ಜಾಗತಿಕ ಆರ್ಥಿಕತೆಯು ಹಲವು ಸವಾಲುಗಳನ್ನು ಎದುರಿಸುತ್ತಿರುವ ಕಾಲದಲ್ಲಿ, ಸ್ಟಾರ್ಟ್‌ಅಪ್‌ಗಳು ಬೆಳವಣಿಗೆಯ ಪರ್ಯಾಯ ಯಂತ್ರಗಳಾಗಲಿವೆಯೆಂದು ಅವರು ಹೇಳಿದರು.
ಕಂಪೆನಿಗಳಿಗೆ ಹೆಚ್ಚು ಸ್ವಾತಂತ್ರ ನೀಡುವ ನೀತಿಯನ್ನು ನರೇಂದ್ರ ಮೋದಿ ಸರಕಾರ ಅನುಸರಿಸುತ್ತಿದೆ. ವಿತ್ತ ಸಚಿವಾಲಯಕ್ಕೆ ಕೆಲವೇ ವ್ಯಾಪಾರಿಗಳು ಭೇಟಿ ನೀಡುತ್ತಿರುವುದು ಹಾಗೂ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಲ್ಲಿ (ಎಫ್‌ಐಪಿಬಿ) ಕಡತಗಳ ರಾಶಿ ಕಡಿಮೆಯಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆಯೆಂದು ಜೇಟ್ಲಿ ತಿಳಿಸಿದರು.
‘ಸ್ಟಾರ್ಟ್‌ಅಪ್ ಇಂಡಿಯಾ’ ಮಾತ್ರವಲ್ಲದೆ, ಸರಕಾರವು ‘ಸ್ಟಾಂಡ್-ಅಪ್ ಇಂಡಿಯಾ’ ಯೋಜನೆಗೂ ಚಾಲನೆ ನೀಡಲಿದೆ. ಅದರನ್ವಯ ಬ್ಯಾಂಕ್ ಶಾಖೆಗಳು ಎಸ್ಸಿ-ಎಸ್ಟಿ ಹಾಗೂ ಮಹಿಳಾ ಉದ್ಯಮಿಗಳಿಗೆ ಸಾಲ ನೀಡಲಿವೆ. ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ, ಸ್ಟಾರ್ಟ್-ಅಪ್ ಇಂಡಿಯಾ ಯೋಜನೆಯನ್ನು ಘೋಷಿಸಿದ್ದರು. ಅದಕ್ಕೆ ಪ್ರತ್ಯೇಕವಾಗಿ ಚಾಲನೆ ನೀಡಲಾಗುವುದು. ಈ ಯೋಜನೆಯು ಎಸ್ಸಿ-ಎಸ್ಟಿ ಹಾಗೂ ಮಹಿಳಾ ಉದ್ಯಮಿಗಳಿಗೆ ಬ್ಯಾಂಕ್‌ಗಳಿಂದ ನಿಧಿ ಪಡೆಯಲು ಸಹಾಯ ಮಾಡುವಂತಹದಾಗಿದೆ. ಈ ವಲಯಗಳಿಂದ ಉದ್ಯಮಿಗಳೇ ಮೂಡಿ ಬರುತ್ತಿಲ್ಲವೆಂದು ಅವರು ವಿವರಿಸಿದರು.
ಸಾರ್ವಜನಿಕವಿರಲಿ, ಖಾಸಗಿಯಿರಲಿ, ಪ್ರತಿಯೊಂದು ಬ್ಯಾಂಕ್ ಶಾಖೆಯೂ ಎಸ್ಸಿ-ಎಸ್ಟಿ ವರ್ಗದಲ್ಲಿ ಒಬ್ಬ ಹಾಗೂ ಮಹಿಳೆಯರಲ್ಲಿ ಒಬ್ಬಳನ್ನು ವಾಸ್ತವವಾಗಿ ದತ್ತು ಪಡೆಯಲಿದೆ. ಅಂದರೆ, ಅವು ತಲಾ ಇಬ್ಬರು ಉದ್ಯಮಿಗಳನ್ನು ದತ್ತು ಪಡೆದು, ಉದ್ಯಮ ಸ್ಥಾಪಿಸಲು ನಿಧಿ ಒದಗಿಸಲಿವೆ. ಈ ವಲಯದ ವ್ಯಾಪಾರ ಅಥವಾ ಉತ್ಪಾದನಾ ಉದ್ಯಮಗಳಿಗೆ ನಿಧಿ ಒದಗಿಸುವುದರಿಂದ, ಮುಂದಿನ 2 ವರ್ಷಗಳಲ್ಲಿ ಸುಮಾರು 3 ಲಕ್ಷ ಹೊಸ ಉದ್ಯಮಿಗಳು ಸೃಷ್ಪಿಯಾಗಲಿದ್ದಾರೆಂದು ಜೇಟ್ಲಿ ತಿಳಿಸಿದರು.







