ಶರತ್ತು ಒಪ್ಪಿಕೊಂಡಲ್ಲಿ ಜಿಎಸ್‌ಟಿಗೆ ಬೆಂಬಲ: ರಾಹುಲ್
ಮುಂಬೈ, ಜ.16: ಕಾಂಗ್ರೆಸ್ ವಿಧಿಸಿರುವ ಶರತ್ತುಗಳನ್ನು ಮೋದಿ ಸರಕಾರವು ಒಪ್ಪಿಕೊಂಡಲ್ಲಿ, ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ವಿಧೇಯಕವು ಕೇವಲ ‘15 ನಿಮಿಷಗಳೊಗೆ’ ಸಂಸತ್‌ನಲ್ಲಿ ಅಂಗೀಕಾರಗೊಳ್ಳಲಿದೆಯೆಂದು ರಾಹುಲ್‌ಗಾಂಧಿ ತಿಳಿಸಿದ್ದಾರೆ.
ಮುಂಬೈಯಲ್ಲಿ ಶನಿವಾರ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಜಿಎಸ್‌ಟಿ ವಿಧೇಯಕದ ಬಗ್ಗೆ ಪ್ರತಿಪಕ್ಷಗಳು ಹೊಂದಿರುವ ಕೆಲವೊಂದು ಆತಂಕಗಳನ್ನು ಮೋದಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದು ಆಪಾದಿಸಿದರು.
ಭಾರತದ ಪ್ರಗತಿಯ ಬಗ್ಗೆ ಆರೆಸ್ಸೆಸ್ ಅತ್ಯಂತ ಜಿಗುಟಾದ ದೂರದೃಷ್ಟಿಯನ್ನು ಹೊಂದಿದೆ. ಆದರೆ ಸ್ಟಾರ್ಟ್‌ಅಪ್ ಯೋಜನೆಗಳಿಗೆ ಚಿಂತನೆಗಳು ಮುಕ್ತವಾಗಿ ಚಲಿಸಲು ಅವಕಾಶ ಬೇಕಾಗುತ್ತದೆಯೆಂದವರು ಹೇಳಿದರು. ಜಿಎಸ್‌ಟಿ ಜಾರಿಯ ಬಗ್ಗೆ ಸರಕಾರವು. ಪ್ರತಿಪಕ್ಷಗಳ ಜೊತೆ ಮಾತುಕತೆಯ ಮೂಲಕ ರಾಜಿಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಸರಕಾರಕ್ಕೆ ಹಾಗೆ ಮಾಡಲು ಮನಸ್ಸಿಲ್ಲ ಎಂದು ರಾಹುಲ್ ಟೀಕಿಸಿದರು.
‘‘ನಾವು ಒಡ್ಡಿರುವ ಶರತ್ತುಗಳನ್ನು ಸ್ವೀಕರಿಸಿದಲ್ಲಿ, ಜಿಎಸ್‌ಟಿ ಸಂಸತ್‌ನಲ್ಲಿ ಅಂಗೀಕಾರಗೊಳ್ಳುವಂತೆ ಮಾಡಲಿದ್ದೇವೆ. ಇದಕ್ಕೆ ಕೇವಲ 15 ನಿಮಿಷಗಳು ಸಾಕು’’ ಎಂದವರು ಹೇಳಿದರು. ತೆರಿಗೆಗಳ ಮೇಲೆ ನಿರ್ಬಂಧವಿಲ್ಲದ ಜಿಎಸ್‌ಟಿ ನಮಗೆ ಬೇಕಾಗಿಲ್ಲ. ಜಿಎಸ್‌ಟಿಯಲ್ಲಿ ಗರಿಷ್ಠ ತೆರಿಗೆಗೆ ನಿರ್ದಿಷ್ಟ ಮಿತಿಯನ್ನು ವಿಧಿಸಬೇಕೆಂದು ತಾವು ಬಯಸುತ್ತೇವೆ ಎಂದರು.
ಜಿಎಸ್‌ಟಿ ಕಾಯ್ದೆಯನ್ನು ಎಪ್ರಿಲ್ 1ರಿಂದ ಜಾರಿಗೊಳಿಸಲು ಸರಕಾರ ಬಯಸಿದೆ. ಫೆಬ್ರವರಿ ಮಧ್ಯಂತರದಲ್ಲಿ ಆರಂಭಗೊಳ್ಳಲಿರುವ ಬಜೆಟ್ ಅಧಿವೇಶನದಲ್ಲಿ, ಮಸೂದೆಯನ್ನು ಅಂಗೀಕರಿಸುವ ಬಗ್ಗೆ ಪ್ರತಿಪಕ್ಷಗಳೊಂದಿಗೆ ಸಹಮತ ಮೂಡುವ ಸಾಧ್ಯತೆಯಿದೆಯೆಂದು ಸರಕಾರವು ಭರವಸೆ ಹೊಂದಿದೆ.





