ಬುರ್ಕಿನಾ ಫಾಸೊ ಹೊಟೇಲ್ ಮೇಲೆ ಭಯೋತ್ಪಾದಕ ದಾಳಿ: 22 ಸಾವು
ಓವಗಡೋಗೊ (ಬುರ್ಕಿನಾ ಫಾಸೊ), ಜ. 16: ಅಲ್-ಖಾಯಿದದೊಂದಿಗೆ ನಂಟು ಹೊಂದಿರುವ ಬಂದೂಕುಧಾರಿಗಳು ಬುರ್ಕಿನಾ ಫಾಸೊ ರಾಜಧಾನಿಯ ಹೊಟೇಲ್‌ಗಳ ಮೇಲೆ ಶನಿವಾರ ಮುಂಜಾನೆ ದಾಳಿ ನಡೆಸಿದ್ದು, ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ.
ಸಂಜೆಯ ವೇಳೆಗೆ ಒಂದು ಹೊಟೇಲ್‌ಗೆ ಭಯೋತ್ಪಾದಕರು ಹಾಕಿರುವ ಮುತ್ತಿಗೆಯನ್ನು ಭದ್ರತಾ ಪಡೆಗಳು ಕೊನೆಗೊಳಿಸಿವೆ. ಈ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಮೃತಪಟ್ಟರು. ಅದೇ ವೇಳೆ, ಹೊಟೇಲ್‌ನಲ್ಲಿದ್ದ 126 ಮಂದಿಯನ್ನು ಬಂಧಮುಕ್ತಗೊಳಿಸಲಾಗಿದೆ. ಆದರೆ, ಅದರ ಪಕ್ಕದ ಇನ್ನೊಂದು ಹೊಟೇಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
ಬುರ್ಕಿನಾ ಫಾಸೊ ದೇಶದ ರಾಜಧಾನಿ ಓವಗಡೋಗೊದ ನಾಲ್ಕು ತಾರಾ ಹೊಟೇಲ್ ಹಾಗೂ ಅದರ ಪಕ್ಕದ ರೆಸ್ಟೋರೆಂಟ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಈ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಹೆಚ್ಚಾಗಿ ಬರುವವರು ವಿಶ್ವಸಂಸ್ಥೆ ಸಿಬ್ಬಂದಿ ಮತ್ತು ವಿದೇಶೀಯರು.
ಬಿಡುಗಡೆಗೊಂಡ 126 ಮಂದಿಯ ಪೈಕಿ 33 ಮಂದಿ ಗಾಯಗೊಂಡಿದ್ದಾರೆ. ಅವರ ಬಿಡುಗಡೆಗಾಗಿ ಫ್ರಾನ್ಸ್‌ನ ವಿಶೇಷ ಪಡೆಗಳ ಬೆಂಬಲದೊಂದಿಗೆ ಬುರ್ಕಿನಾಬೆ ಪಡೆಗಳು ಕಾರ್ಯಾಚರಣೆ ನಡೆಸಿದ್ದವು.
‘‘ಸ್ಪ್ಲೆಂಡಿಡ್ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಮುತ್ತಿಗೆ ಕೊನೆಗೊಂಡಿದೆ. ಆದರೆ, ರೆಸ್ಟೋರೆಂಟ್ ಸಮೀಪದ ಇನ್ನೊಂದು ಹೊಟೇಲ್‌ನಲ್ಲಿ ಮುತ್ತಿಗೆ ಮುಂದುವರಿದಿದೆ’’ ಎಂದು ಆಂತರಿಕ ಸಚಿವ ಸೈಮನ್ ಕಾಂಪವೊರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
‘‘33 ಗಾಯಾಳುಗಳು ಸೇರಿದಂತೆ ಒಟ್ಟು 126 ಮಂದಿಯನ್ನು ಬಂಧಮುಕ್ತಗೊಳಿಸಲಾಗಿದೆ. ಓರ್ವ ಅರಬ್ ಮತ್ತು ಇಬ್ಬರು ಕರಿಯ ಆಫ್ರಿಕನ್ನರು ಸೇರಿದಂತೆ ಮೂವರು ಭಯೋತ್ಪಾದಕರನ್ನು ಕೊಲ್ಲಲಾಗಿದೆ’’ ಎಂದರು.





