ಪಠಾಣ್‌ಕೋಟ್ ದಾಳಿ: ಡ್ರಗ್‌ಜಾಲದ ಜೊತೆ ಸಲ್ವಿಂದರ್‌ಸಿಂಗ್ ನಂಟು

ಕಳ್ಳಸಾಗಣೆಗೆ ನೆರವಾಗಲು ವಜ್ರದ ಲಂಚ ಪಡೆಯುತ್ತಿದ್ದ ಎಸ್ಪ್ಪಿ
ಹೊಸದಿಲ್ಲಿ, ಜ.16: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿ ಘಟನೆಯ ಬಳಿಕ ಅನುಮಾನದ ಸುಳಿಗೆ ಸಿಲುಕಿರುವ ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್, ಗಡಿಯಾಚೆಯಿಂದ ನಡೆಸಲಾಗುವ ಮಾದಕದ್ರವ್ಯದ ಪ್ರತಿ ಕಳ್ಳಸಾಗಣೆ ಸಾಮಾಗ್ರಿಗೂ, ವಜ್ರಗಳ ರೂಪದಲ್ಲಿ ಲಂಚವನ್ನು ಪಡೆಯುತ್ತಿದ್ದಾರೆಂಬುದು ರಾಷ್ಟ್ರೀಯ ತನಿಖಾತಂಡ(ಎನ್‌ಐಎ)ದ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಪಠಾಣ್‌ಕೋಟ್ ದಾಳಿ ಸಂಚಿನಲ್ಲಿ ಸಲ್ವಿಂದರ್ ಉಗ್ರರ ಜೊತೆ ಶಾಮೀಲಾಗಿ ದ್ದಾರೆಂಬ ಶಂಕೆಯಲ್ಲಿ ಎನ್‌ಐಎ, ಮೂರು ದಿನಗಳ ಕಾಲ ಅವರ ವಿಚಾರಣೆ ನಡೆಸಿತ್ತು. ಸಲ್ವಿಂದರ್‌ಗೆ ಲಂಚವಾಗಿ ದೊರೆಯುವ ವಜ್ರಗಳನ್ನು ಪರೀಕ್ಷಿಸಲು ಅವರ ಸ್ನೇಹಿತ, ಆಭರಣ ವ್ಯಾಪಾರಿ ರಾಜೇಶ್ ವರ್ಮಾ ನೆರವಾಗುತ್ತಿದ್ದ. ಆತ ಈ ವಜ್ರಗಳ ನೈಜತೆಯನ್ನು ದೃಢೀಕರಿಸುತ್ತಿದ್ದ. ಉಗ್ರರು ಕಾರಿನಲ್ಲಿ ಸಲ್ವಿಂದರ್ ಜೊತೆ ವರ್ಮಾನನ್ನು ಕೂಡಾ ಅಪಹರಿಸಿದ್ದರು.ವರ್ಮಾನ ಕೊರಳು ಸೀಳಿದ್ದ ಉಗ್ರರು ಆನಂತರ ಆತನನ್ನು ರಸ್ತೆಗೆ ಎಸೆದಿದ್ದರು. ಗಂಭೀರ ಗಾಯಗೊಂಡಿದ್ದ ವರ್ಮಾ ಈಗ ಪಠಾಣ್‌ಕೋಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವರ್ಮಾನ. ದೇಹಸ್ಥಿತಿ ಸುಧಾರಿಸಿದ ಬಳಿಕ ಆತನನ್ನು ವಿಚಾರಣೆಗಾಗಿ ದಿಲ್ಲಿಗೆ ಕರೆಸಿಕೊಳ್ಳಲಾಗುವುದೆಂದು ಎನ್‌ಐಎ ಮೂಲಗಳು ತಿಳಿಸಿವೆ. ವರ್ಮಾನನ್ನು ಪ್ರಸ್ತುತ ಪಂಜಾಬ್‌ನ ಎನ್‌ಐಎ ತಂಡಗಳು ಪರಿಶೀಲಿಸುತ್ತಿವೆ.
ತನ್ನ ಬಾಣಸಿಗನೆಂದು ಸಲ್ವಿಂದರ್‌ಸಿಂಗ್ ಹೇಳಿಕೊಳ್ಳುತ್ತಿದ್ದ ಮದನ್‌ಗೋಪಾಲ್ ಎಂಬಾತ,ವಾಸ್ತವಿಕವಾಗಿ ಅವರ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆಂಬುದು ಕೂಡಾ ವಿಚಾರಣೆಯಿಂದ ತಿಳಿದುಬಂದಿದೆ. ಚೈನೀಸ್ ವಯರ್‌ಲೆಸ್ ಸೆಟ್ ಪತ್ತೆ
ಎನ್‌ಐಎ ತಂಡಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ, ಭಯೋತ್ಪಾದಕರು ಡಿಸೆಂಬರ್ 31ರಂದು ವಾಯುಪಡೆ ನೆಲೆಗೆ ಪ್ರಯಾಣಿಸಲು ಬಳಸಿದ್ದ ಕಾರಿನಲ್ಲಿ ಚೀನಾ ನಿರ್ಮಿತ ವಯರ್‌ಲೆಸ್ ಸೆಟ್ ಪತ್ತೆಯಾಗಿದೆ. ಆದರೆ ವಯರ್‌ಲೆಸ್ ಸೆಟ್‌ನಲ್ಲಿದ್ದ ದತ್ತಾಂಶಗಳನ್ನು ಉಗ್ರರು ಅಳಿಸಿಹಾಕಿದ್ದಾರೆ. ಹೀಗೆ ಅಳಿಸಿಹಾಕಲಾದ ದತ್ತಾಂಶಗಳನ್ನು ಮರಳಿಪಡೆಯಲು, ವಯರ್‌ಲೆಸ್ ಸೆಟ್‌ನ್ನು ರಾಷ್ಟ್ರೀಯ ತಂತ್ರಜ್ಞಾನ ಸಂಶೋಧನಾಸಂಸ್ಥೆಗೆ ಕಳುಹಿಸಿಕೊಡಲಾಗಿದೆ.







