ಪಡುಮಲೆ ಅಭಿವೃದ್ಧಿ: ಹತ್ತು ದಿನಗಳೊಳಗೆ ಕಾಮಗಾರಿ ಆರಂಭಿಸಲು ತೀರ್ಮಾನ
ಪುತ್ತೂರು, ಜ.16: ಬಡಗನ್ನೂರು ಗ್ರಾಮದ ಪಡುಮಲೆ ಯಲ್ಲಿರುವ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮಭೂಮಿಯನ್ನು ಪ್ರವಾಸಿ ಅತ್ಯಾ ಕರ್ಷಕ ತಾಣವಾಗಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗಿದ್ದು, ಮುಂದಿನ 10 ದಿನಗಳೊಗಾಗಿ ಶಂಖಪಾಲ ಬೆಟ್ಟವನ್ನು ಸಮತಟ್ಟುಗೊಳಿಸುವ ಆರಂಭಿಕ ಹಂತದ ಕೆಲಸ ಆರಂಭಿಸಲು ಶನಿವಾರ ನಡೆದ ಪಡುಮಲೆ ಅಭಿವೃದ್ಧಿ ಸಮಿತಿಯ ಜಿಲ್ಲಾಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪುತ್ತೂರಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಬಿ.ಇಬ್ರಾಹೀಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಶಂಕಪಾಲ ಬೆಟ್ಟದಲ್ಲಿರುವ 2.24 ಸೆಂಟ್ಸ್ ಸರಕಾರಿ ಸ್ಥಳದಲ್ಲಿ ಮೊದಲ ಹಂತದ ಕಾಮಗಾರಿ ನಡೆಸುವುದು, ಸಭಾಭವನ ಸೇರಿದಂತೆ 1.05 ಕೋ.ರೂ.ನ ಆರಂಭಿಕ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ಮೂಲಕ ನಡೆಸುವುದೆಂದು ತೀರ್ಮಾನಿಸಿ, ಶಂಖಪಾಲ ಬೆಟ್ಟವನ್ನು ಸಮತಟ್ಟುಗೊಳಿಸುವ ಕೆಲಸವನ್ನು ಮುಂದಿನ 10 ದಿನಗಳೊಳಗೆ ಆರಂಭಿಸಲು ನಿರ್ಮಿತಿ ಕೇಂದ್ರದವರಿಗೆ ಸೂಚಿಸಲಾಯಿತು.
ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಶಂಖಪಾಲ ಬೆಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿದೆ ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ನೆಲ ಸಮತಟ್ಟುಗೊಳಿಸುವ ಕೆಲಸದಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ಸ್ಥಳೀಯ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೆ.ಪಿ.ಸಂಜೀವ ರೈ, ಕೆ.ಸಿ.ಪಾಟಾಳಿ, ಬಾಲಕೃಷ್ಣ ರೈ ಕುಡ್ಕಾಡಿ ಮತ್ತು ಮುಹಮ್ಮದ್ ಬಡಗನ್ನೂರುರಿಗೆ ಜವಾಬ್ದಾರಿ ವಹಿಸಲಾಯಿತು. ಕೆಲಸದ ನಿರ್ವಹಣೆಯ ಬಗ್ಗೆ ಕಾಳಜಿ ವಹಿಸಿ ಲೋಪ ಗಳಾಗದಂತೆ ನೋಡಿಕೊಳ್ಳಬೇಕು. ಲೋಪಗಳು ಕಂಡುಬಂದಲ್ಲಿ ಅದನ್ನು ಸ್ಥಳೀಯ ಶಾಸಕರು ಇಲ್ಲವೇ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರಿಗೆ ಸೂಚಿಸಲಾಯಿತು. ಮುಂದಿನ 15 ದಿನಗಳೊಳಗಾಗಿ ಇನ್ನೊಮ್ಮೆ ಅಭಿವೃದ್ಧಿ ಸಮಿತಿಯ ಸಭೆ ನಡೆಸಿ ಶಂಖಪಾಲ ಬೆಟ್ಟದಲ್ಲಿ ನೀರಿನ ವ್ಯವಸ್ಥೆ, ಸಭಾಭವನ ನಿರ್ಮಾಣ, ಶೌಚಾಲಯ ವ್ಯವಸ್ಥೆ, ಆವರಣಗೋಡೆ ರಚನೆ, ಪ್ರಾಜ್ಯ ವಸ್ತು ಸಂಗ್ರಹಾಲಯ ನಿರ್ಮಾಣ ಮೊದಲಾದ ಕಾಮಗಾರಿಗಳ ಕುರಿತು ತೀರ್ಮಾನ ಕೈಗೊಳ್ಳೋಣ. ಅದಕ್ಕೂ ಮೊದಲು ನೆಲ ಸಮತಟ್ಟುಗೊಳಿಸುವ ಕೆಲಸ ಆರಂಭವಾಗಲಿ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇನ್ನೂ ವಿಳಂಬ ಬೇಡ-ಆಗ್ರಹ
ಪಡುಮಲೆ ಅಭಿವೃದ್ಧಿಯ ವಿಚಾರದಲ್ಲಿ ಈಗಾಗಲೇ ಬಹಳಷ್ಟು ವಿಳಂಬವಾಗಿದೆ. ಯೋಜನೆ ತಯಾರಿಸಿ 3 ವರ್ಷ ಕಳೆದರೂ, 2105ರ ಜನವರಿ 27ರಂದು ಆರಂಭಿಕ ಹಂತದ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಾಗಿದ್ದರೂ ಯಾವುದೇ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ. ಕಾಮಗಾರಿ ವಿಳಂಬದ ಬಗ್ಗೆ ಊರಿನ ಮಂದಿಯೇ ಸಮಿತಿಯ ಸದಸ್ಯರನ್ನು ಪ್ರಶ್ನಿಸುವಂತಾಗಿದೆ ಎಂದು ಸದಸ್ಯರಾದ ಮುಹಮ್ಮದ್ ಬಡಗನ್ನೂರು, ಶಶಿಧರ್ ರೈ ಕುತ್ಯಾಳ, ಕೆ.ಸಿ.ಪಾಟಾಳಿ ಪಡುಮಲೆ ಮತ್ತಿತರರು ಒತ್ತಾಯಿಸಿದರು. ಸಭೆ ಕರೆದ ಉದ್ದೇಶದ ಮತ್ತು ಅಭಿವೃದ್ಧಿಯ ಕುರಿತು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಮಾಹಿತಿ ನೀಡಿದರು, ಪುತ್ತೂರು ಉಪವಿಭಾಗಾಧಿಕಾರಿ ರಾಜೇಂದ್ರ ಕೆ.ವಿ, ಪಡುಮಲೆ ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಾಲಕೃಷ್ಣ ರೈ ಕುದ್ಕಾಡಿ, ಶೇಖರ್ ನಾರಾವಿ, ಲಕ್ಷ್ಮೀನಾರಾಯಣ ರಾವ್ ಪಡುಮಲೆ, ವಿಜಯಕುಮಾರ್ ಸೊರಕೆ, ಉಲ್ಲಾಸ್ ಕೋಟ್ಯಾನ್, ಉಷಾ ಅಂಚನ್, ರವಿರಾಜ್ ರೈ ಸಜಂಕಾಡಿ, ಕೆ.ಪಿ.ಸಂಜೀವ ರೈ, ನಿತ್ಯಾನಂದ ನಾಯಕ್ ಸುಳ್ಯಪದವು, ಗುರುಪ್ರಸಾದ್ ರೈ ಕುದ್ಕಾಡಿ, ಮಣಿತ್ ರೈ ಕುದ್ಕಾಡಿ, ಶ್ರೀಧರ್ ಪೂಜಾರಿ ಗೆಜ್ಜೆಗಿರಿ ನಂದನಹಿತ್ಲು, ಜಯರಾಜ್ ಶೆಟ್ಟಿ ಅಣಿಲೆ, ಕಲಾವತಿ ಸಂಜೀವ ಗೌಡ ಪಟ್ಲಡ್ಕ, ನೇಮಾಕ್ಷ ಸುವರ್ಣ, ಜಯಲಕ್ಷ್ಮೀ ಸುರೇಶ್, ರಾಮಣ್ಣ ಗೌಡ ಪಡುಮಲೆ ಮತ್ತಿತರರು ಉಪಸ್ಥಿತರಿದ್ದರು. ಒಪ್ಪಿಗೆ ಪತ್ರ ಸಿದ್ಧಪಡಿಸಲು ಗ್ರಾಮಕರಣಿಕರಿಗೆ ಸೂಚನೆ ಶಂಖಪಾಲ ಬೆಟ್ಟವು ಸರಕಾರಿ ಸ್ಥಳವಾಗಿರು ವುದರಿಂದ ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಯಾವುದೇ ಸಮಸ್ಯೆಯಿಲ್ಲ. ಆದರೆ ಮುಂದಿನ ಹಂತದ ಕಾಮಗಾರಿಗಳನ್ನು ನಡೆಸಲು ಅಗತ್ಯವಿರುವ ಖಾಸಗಿ ಜಮೀನಿನ ಬಗ್ಗೆ ಸಂಬಂಧ ಪಟ್ಟವರಿಂದ ಒಪ್ಪಿಗೆ ಪತ್ರ ಪಡೆಯ ಬೇಕಾಗಿದೆ. ಬಲ್ಲಾಳರ ಬೀಡು ಅಭಿವೃದ್ಧಿ, ಕೂವೆತೋಟ ಸಾನಿಧ್ಯ, ಬುದ್ಧಿವಂತನ ವಧಾ ಸ್ಥಳ, ಗೆಜ್ಜೆಗಿರಿ ನಂದನ ದೇಯಿ ಬೈದೆತಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಅಗತ್ಯವಿರುವ ಜಮೀನು ಕುರಿತು ಸಂಬಂಧಪಟ್ಟವರಿಂದ ಆಕ್ಷೇಪವಿಲ್ಲ ಎಂಬ ಒಪ್ಪಿಗೆ ಪತ್ರ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಗ್ರಾಮಕರಣಿಕರಿಗೆ ಸೂಚಿಸಿದರು.







