ಇಂದು ಮೂರನೆ ಏಕದಿನ ಭಾರತಕ್ಕೆ ಹ್ಯಾಟ್ರಿಕ್ ಸೋಲಿನ ಭೀತಿ

ಆಸೀಸ್‌ಗೆ ಸರಣಿ ಗುರಿ
ಮೆಲ್ಬೋರ್ನ್, ಜ.16: ಮೊದಲೆರಡು ಏಕದಿನ ಪಂದ್ಯಗಳಲ್ಲಿ ಸ್ಪರ್ಧಾತ್ಮಕ ಸ್ಕೋರ್ ಗಳಿಸಿದ ಹೊರತಾಗಿಯೂ ಬೌಲರ್‌ಗಳ ಕಳಪೆ ಪ್ರದರ್ಶನದಿಂದ ಸೋಲುಂಡಿರುವ ಟೀಮ್ ಇಂಡಿಯಾ ರವಿವಾರ ಇಲ್ಲಿ ನಡೆಯಲಿರುವ ಮೂರನೆ ಏಕದಿನದಲ್ಲಿ ಆಸ್ಟ್ರೇಲಿಯದ ವಿರುದ್ಧ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಧೋನಿ ಪಡೆಗೆ ಮೂರನೆ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆತಿಥೇಯರಿಗೆ ಗೆಲುವಿಗೆ 300ಕ್ಕೂ ಅಧಿಕ ರನ್ ನೀಡಿದ್ದ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ವಿಫಲವಾಗಿತ್ತು ಇದೀಗ ಒತ್ತಡಕ್ಕೆ ಸಿಲುಕಿರುವ ನಾಯಕ ಎಂಎಸ್ ಧೋನಿ ಮತ್ತೊಮ್ಮೆ ದಾಂಡಿಗರಿಂದಲೇ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.
ಭಾರತ ರವಿವಾರದ ಪಂದ್ಯವನ್ನೂ ಸೋತರೆ ಸರಣಿಯನ್ನು ಕಳೆದುಕೊಳ್ಳಲಿದೆ. ಕಳೆದ ವರ್ಷದ ವಿಶ್ವಕಪ್‌ನ ಬಳಿಕ ಭಾರತ ಆಡಿರುವ ಎರಡೂ ಸರಣಿಗಳನ್ನು ಸೋತಿದೆ. ಮೊದಲಿಗೆ ಬಾಂಗ್ಲಾದೇಶದ ವಿರುದ್ಧ ಅದರದೇ ನೆಲದಲ್ಲಿ ಸರಣಿ ಸೋತಿದ್ದ ಭಾರತ ಸ್ವದೇಶದಲ್ಲಿ ನಡೆದ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ಶರಣಾಗಿತ್ತು. ಇದೀಗ ಹ್ಯಾಟ್ರಿಕ್ ಸರಣಿ ಸೋಲಿನ ಭೀತಿ ಎದುರಿಸುತ್ತಿದೆ.
ಭಾರತದ ದಾಂಡಿಗರು ಸತತ ಎರಡು ಬಾರಿ 300ಕ್ಕೂ ಅಧಿಕ ರನ್ ಗಳಿಸಿದರೂ ಬೌಲರ್‌ಗಳ ವೈಫಲ್ಯ ಹಾಗೂ ಕಳಪೆ ಫೀಲ್ಡಿಂಗ್‌ನಿಂದಾಗಿ ಪಂದ್ಯವನ್ನು ಸೋತಿತ್ತು. ಈ ಬೆಳವಣಿಗೆಯು ಧೋನಿಯನ್ನು ಒತ್ತಡಕ್ಕೆ ಸಿಲುಕಿಸಿದೆ. ಪ್ರಸ್ತುತ ಸರಣಿಯಲ್ಲಿ ಆರಂಭಿಕ ದಾಂಡಿಗ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಹೆಚ್ಚಿನ ಜವಾಬ್ದಾರಿಯಿಂದ ಆಡುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಇವರಿಬ್ಬರ ಜೊತೆಯಾಟದ ಸ್ಟ್ರೈಕ್ ರೇಟ್ ಹೆಚ್ಚಾಗಿದೆ. ನಾಲ್ಕನೆ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ.
ಆದರೆ, ಕೆಳ ಕ್ರಮಾಂಕದಲ್ಲಿ ಪವರ್ ಹಿಟ್ಟರ್‌ಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಭಾರತದ ಸ್ಕೋರ್ 320 ರನ್ ಗಡಿ ದಾಟುತ್ತಿಲ್ಲ. ಕನ್ನಡಿಗ ಮನೀಷ್ ಪಾಂಡೆ ಲಭಿಸಿದ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗಿದ್ದರು. ಅವರು ಮೂರನೆ ಪಂದ್ಯದಲ್ಲಿ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಪಾಂಡೆ ಬದಲಿಗೆ ಗುರುಕೀರತ್ ಸಿಂಗ್‌ಗೆ ಅವಕಾಶ ಸಿಗಬಹುದು.. ಆದರೆ, ಈ ಇಬ್ಬರೂ ಆಟಗಾರರಿಗೆ ಆಸ್ಟ್ರೇಲಿಯ ಪಿಚ್‌ನಲ್ಲಿ ಆಡಿದ ಅನುಭವವಿಲ್ಲ.
ಮುಂದುವರಿದ ಧವನ್ ಕಳಪೆ ಫಾರ್ಮ್: ದಿಲ್ಲಿ ದಾಂಡಿಗ ಶಿಖರ್ ಧವನ್ ಕಳಪೆ ಫಾರ್ಮ್ ಆಸೀಸ್ ವಿರುದ್ಧದ ಸರಣಿಯಲ್ಲೂ ಮುಂದುವರಿದಿದೆ. ಎಡಗೈ ದಾಂಡಿಗ ಧವನ್ ಅಗ್ರ ಕ್ರಮಾಂಕದಲ್ಲಿ ವೈಫಲ್ಯ ಕಾಣುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಧವನ್ ಕಳೆದ 13 ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿಲ್ಲ. ವಿಶ್ವಕಪ್‌ನ ವೇಳೆ ಐರ್ಲೆಂಡ್‌ನ ವಿರುದ್ಧ ಕೊನೆಯ ಬಾರಿ ಶತಕ ಸಿಡಿಸಿದ್ದರು.
ಟೀಮ್ ನ್ಯೂಸ್:
ಆಸ್ಟ್ರೇಲಿಯ: ವೇಗದ ಬೌಲರ್ ಜೊಶ್ ಹೇಝಲ್‌ವುಡ್‌ಗೆ ವಿಶ್ರಾಂತಿ ನೀಡಲು ಬಯಸಿರುವ ಆಸ್ಟ್ರೇಲಿಯದ ಆಯ್ಕೆಗಾರರು ಜಾನ್ ಹೇಸ್ಟಿಂಗ್ಸ್‌ಗೆ ತವರು ಮೈದಾನದಲ್ಲಿ ಆಡಲು ಅವಕಾಶ ನೀಡಲು ನಿರ್ಧರಿಸಿದ್ದಾರೆ. ಮಿಚೆಲ್ ಮಾರ್ಷ್ 3ನೆ ಪಂದ್ಯಕ್ಕೆ ವಾಪಸಾಗಲಿದ್ದಾರೆ. ಬ್ರಿಸ್ಬೇನ್ ಏಕದಿನದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಕೇನ್ ರಿಚರ್ಡ್‌ಸನ್ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಭಾರತ: ನಾಯಕ ಧೋನಿ ಇಬ್ಬರು ಸ್ಪಿನ್ನರ್‌ಗಳ ಬದಲಿಗೆ ಆಲ್‌ರೌಂಡರ್ ರಿಷಿ ಧವನ್‌ರನ್ನು 3ನೆ ಏಕದಿನದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿಲ್ಲ. ಶಿಖರ್ ಧವನ್‌ಗೆ ಮತ್ತೊಮ್ಮೆ ಅವಕಾಶ ಸಿಗುವ ನಿರೀಕ್ಷೆಯಿದೆ. ಪಾಂಡೆಗೆ ಮತ್ತೊಂದು ಅವಕಾಶ ಸಿಗಬಹುದು. ಭಾರತ ಎರಡನೆ ಏಕದಿನ ಪಂದ್ಯದಲ್ಲಿ ಆಡಿದ್ದ ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಬಹುದು. ಉಮೇಶ್ ಯಾದವ್ ಬದಲಿಗೆ ಭುವನೇಶ್ವರ್ ಕುಮಾರ್ ಅವಕಾಶ ಪಡೆಯಬಹುದು.
ಪಿಚ್ ಹಾಗೂ ವಾತಾವರಣ:
2015ರ ವಿಶ್ವಕಪ್‌ನಲ್ಲಿ ಎಂಸಿಜಿ ಪಿಚ್‌ನಲ್ಲಿ ಆಡಲಾದ ಐದು ಏಕದಿನಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ನಾಲ್ಕು ಬಾರಿ 300ಕ್ಕೂ ಅಧಿಕ ರನ್ ಗಳಿಸಿತ್ತು. ಎಂಸಿಜಿ ಪಿಚ್ ಸಾಮಾನ್ಯಕ್ಕಿಂತ ಹೆಚ್ಚು ವೇಗದಿಂದ ಕೂಡಿದ್ದು, ಮತೊಮ್ಮೆ ದೊಡ್ಡ ಸ್ಕೋರ್ ದಾಖಲಾಗಬಹುದು.
ಅಂಕಿ-ಅಂಶ:
* ಆಸ್ಟ್ರೇಲಿಯ 2014ರ ನವೆಂಬರ್‌ನಲ್ಲಿ ಕೊನೆಯ ಬಾರಿ ಸ್ವದೇಶದಲ್ಲಿ ಏಕದಿನ ಪಂದ್ಯವನ್ನು ಸೋತಿತ್ತು. ಇದೀಗ ಅದು ಸ್ವದೇಶದಲ್ಲಿ ಸತತ 17 ಪಂದ್ಯಗಳಲ್ಲಿ ಸೋಲನ್ನೇ ಕಂಡಿಲ್ಲ. * ಭಾರತ 300ಕ್ಕೂ ಅಧಿಕ ರನ್ ಗಳಿಸಿದ್ದ ಹೊರತಾಗಿಯೂ ಸತತ ಸೋಲು ಕಂಡಿರುವ ಮೂರನೆ ತಂಡವಾಗಿದೆ.
ಭಾರತ(ಸಂಭಾವ್ಯರು): 1.ಶಿಖರ್ ಧವನ್,2.ರೋಹಿತ್ ಶರ್ಮ, 3. ವಿರಾಟ್ ಕೊಹ್ಲಿ, 4. ಅಜಿಂಕ್ಯರಹಾನೆ, 5. ಮನೀಶ್ ಪಾಂಡೆ, 6.ಎಂಎಸ್ ಧೋನಿ(ನಾಯಕ), 7. ರವೀಂದ್ರ ಜಡೇಜ, 8.ಆರ್.ಅಶ್ವಿನ್, 9. ಇಶಾಂತ್ ಶರ್ಮ, 10. ಉಮೇಶ್ ಯಾದವ್/ಭುವನೇಶ್ವರ ಕುಮಾರ್, 11. ಬರೀಂದರ್ ಸ್ರಾನ್.
ಆಸ್ಟ್ರೇಲಿಯ(ಸಂಭಾವ್ಯರು): 1.ಆ್ಯರೊನ್ ಫಿಂಚ್, 2. ಶಾನ್ ಮಾರ್ಷ್, 3.ಸ್ಟೀವನ್ ಸ್ಮಿತ್(ನಾಯಕ), 4.ಜಾರ್ಜ್ ಬೈಲಿ, 5.ಗ್ಲೆನ್ ಮ್ಯಾಕ್ಸ್‌ವೆಲ್, 6.ಮಿಚೆಲ್ ಮಾರ್ಷ್, 7.ಮ್ಯಾಥ್ಯೂ ವೇಡ್(ವಿಕೆಟ್‌ಕೀಪರ್), 8.ಜೇಮ್ಸ್ ಫಾಕ್ನರ್, 9.ಜಾನ್ ಹೇಸ್ಟಿಂಗ್ಸ್, 10.ಸ್ಕಾಟ್ ಬೊಲೆಂಡ್, 11.ಜೊಯೆಲ್ ಪ್ಯಾರಿಸ್.
ಪಂದ್ಯದ ಸಮಯ: ಬೆಳಗ್ಗೆ 8:50







