ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ: ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ: ಆಸ್ಕರ್
ಮಂಗಳೂರು, ಜ.16: ಕರ್ನಾಟಕ ಸರಕಾರವು ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್‌ರಾಜ್ ವಿಧೇಯಕ-2015 ಎಂದು ಪುನರ್ ನಾಮಕರಣ ಗೊಳಿಸುವುದರೊಂದಿಗೆ ಮಹಾತ್ಮ ಗಾಂಧೀಜಿಯವರಿಗೆ ಆಶಯಗಳಿಗೆ ಒತ್ತುನೀಡುವ ಕ್ರಾಂತಿಕಾರಿ ವ್ಯವಸ್ಥೆಯ ಬದಲಾವಣೆಗೆ ಮುಂದಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕೆ.ಆರ್. ರಮೇಶ್ ಕುಮಾರ್ ನೇತೃತ್ವದ ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ಶಿಫಾರಸಿನ ಆಧಾರದಲ್ಲಿ ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಿಂದ ಪಂಚಾಯತ್ ಮಟ್ಟದಲ್ಲಿ ಕ್ಷೇತ್ರ ಮೀಸಲಾತಿ ಕನಿಷ್ಠ ಎರಡು ಅವಧಿಗಳಿಗೆ ಮುಂದುವರಿಯಲಿದೆ. ಇದು ಪಂಚಾಯತ್ ಮಟ್ಟದಲ್ಲಿ ಆಸಕ್ತಿಯಿಂದ ದುಡಿಯುವವರಿಗೆ 2 ಅವಧಿಗೆ ಅಂದರೆ ಕನಿಷ್ಠ 10 ವರ್ಷಗಳ ಸೇವಾವಕಾಶ ಒದಗಿ ಸಲಿದೆ. ಜತೆಗೆ ಗ್ರಾಮ, ತಾಲೂಕು, ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಐದು ವರ್ಷಗಳಿಗೆ ನಿಗದಿ ಪಡಿಸಲಾಗಿದೆ. ಕಾಯ್ದೆಯ ತಿದ್ದುಪಡಿಯ ಪ್ರಕಾರ ಗ್ರಾಮಸಭೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ಗ್ರಾಮಸಭೆ ಮಾಡದ ಅಧ್ಯಕ್ಷರನ್ನ್ನು ಬರ್ಕಾಸ್ತು ಮಾಡುವ ಅವಕಾಶವನ್ನು ಕಲ್ಪಿಸ ಲಾಗಿದೆ. ಮಾತ್ರವಲ್ಲದೆ, ಹಲವಾರು ಕಾರಣಗಳಿಗಾಗಿ ಗ್ರಾಪಂ ಸದಸ್ಯ ಅಥವಾ ಪದಾಧಿಕಾರಿಗಳಿಗೆ ಸದಸ್ಯತ್ವದಿಂದ ಅನರ್ಹಗೊಳಿಸುವ ಅಥವಾ ಪದಚ್ಯುತಗೊಳಿ ಸುವ ಶಿಫಾರಸನ್ನು ಸರಕಾರಕ್ಕೆ ಮಾಡುವ ಅಧಿಕಾರವನ್ನು ಗ್ರಾಪಂಗೆ ನೀಡಲಾಗಿದೆ. ಗ್ರಾಮೀಣ ಯೋಜನೆಗಳ ಅನುಷ್ಠಾನ ಫಲಪ್ರದವಾಗಲು ರಾಜ್ಯ ಹಣಕಾಸು ಆಯೋಗ ಶಿಫಾರಸು ಮಾಡುವ ಅನುದಾನದಲ್ಲಿ ಶೇ.20ರಷ್ಟು ಅನುದಾನವನ್ನು ಮುಕ್ತ ಅನುದಾನವಾಗಿ ಬಳಕೆ ಮಾಡಿಕೊಳ್ಳಲು ಗ್ರಾಪಂಗಳಿಗೆ ಅವಕಾಶ ನೀಡುವ ಅಧಿ ಕಾರ ನೀಡಲಾಗಿದೆ. ಇದೊಂದು ಮಹತ್ವದ ಹೆಜ್ಜೆ ಎಂದು ಅವರು ಹೇಳಿದರು.
ಹಣಕಾಸಿನ ಸಾಲ, ಬಡತನ ಅಥವಾ ಇತರ ಯಾವುದೇ ಕಾರಣಗಳಿಗಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳುವ ರೈತರು ಮತ್ತು ಇತರರಲ್ಲಿ ಸೂಕ್ಷ್ಮವಾಗಿ ಸಮಾಲೋಚನಾ ಪ್ರಕ್ರಿಯೆ ಮೂಲಕ ವಿಶ್ವಾಸ ತುಂಬುವ ಜವಾಬ್ದಾರಿ ಗ್ರಾಪಂನದ್ದು ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದರು. ಗ್ರಾಪಂಗಳಿಗೆ ಚುನಾಯಿತನಾಗುವ ಪ್ರತಿಯೋರ್ವ ಸದಸ್ಯ ಮತ್ತು ಅವರ ಕುಟುಂಬ ವರ್ಗದವರು ನಿಗದಿತ ಕಾಲಾನುಕ್ರಮದಲ್ಲಿ ತಮ್ಮ 2 ಲಕ್ಷ ರೂ.ಗಿಂತ ಹೆಚ್ಚಿನ ಸ್ಥಿರ ಮತ್ತು ಚರಾಸ್ತಿ ಹಾಗೂ ಹೊಣೆಗಾರಿಕೆಯನ್ನು ಘೋಷಿಸುವುದನ್ನು ತಿದ್ದುಪಡಿ ಕಡ್ಡಾಯಗೊಳಿಸಿದೆ. ಚುನಾಯಿತ ಪ್ರತಿನಿಧಿಗಳ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು ಮೊಟ್ಟಮೊದಲ ಬಾರಿಗೆ ಪಟ್ಟಿ ಮಾಡಲಾಗಿದೆ. ಈ ತಿದ್ದುಪಡಿ ಯಿಂದಾಗಿ ಅಧಿಕಾರ ವಿಕೇಂದ್ರೀಕರಣವು ವ್ಯವಸ್ಥಿತವಾಗಿ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಪ್ರತಾಪ್ ಚಂದ್ರ ಶೆಟ್ಟಿ, ಎಂ.ಎ.ಗಫೂರ್, ಬಿ.ಎಚ್.ಖಾದರ್ ಮೊದಲಾದವರು ಉಪಸ್ಥಿತರಿದ್ದರು.





