‘ಪೋಲಿಯೊ ಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸಿ’; ಪಲ್ಸ್ ಪೋಲಿಯೊ ಜಾಗೃತಿ ಜಾಥಾಕ್ಕೆ ಚಾಲನೆ

ಬೆಂಗಳೂರು, ಜ. 16: ಪೋಲಿಯೊ ಸಂಪೂರ್ಣ ನಿರ್ಮೂಲನೆಗಾಗಿ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೊ ಅಭಿಯಾನ ಯಶಸ್ವಿಗೊಳಿಸಲು ಬೃಹತ್ ಪಾಲಿಕೆಯ ಎಲ್ಲಾ ಸದಸ್ಯರು, ಶಾಲಾ-ಕಾಲೇಜುಗಳು, ಸಂಘ- ಸಂಸ್ಥೆಗಳು ಅಗತ್ಯ ಸಹಕಾರ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಮನವಿ ಮಾಡಿದ್ದಾರೆ.
ಶನಿವಾರ ನಗರದ ಮಹಾತ್ಮ ಗಾಂಧಿ ರಸ್ತೆಯಿಂದ ಪಾಲಿಕೆ ಕೇಂದ್ರ ಕಚೇರಿಯವರೆಗೆ ಆರೋಗ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೊ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೋಲಿಯೊ ಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸಿ ಎಂದು ಕೋರಿದರು.
ಜಾಥಾ ಉದ್ಘಾಟಿಸಿ ಮಾತನಾಡಿದ ಮೇಯರ್ ಮಂಜುನಾಥ ರೆಡ್ಡಿ, ಪಾಲಿಕೆ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ಅಭಿಯಾನ ಹಮ್ಮಿಕೊಂಡಿದ್ದು, ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವುದು ಎಲ್ಲ್ಲ ತಂದೆ-ತಾಯಿಯ ಕರ್ತವ್ಯ. ಮಕ್ಕಳಿಗೆ ಪೋಲಿಯೊ ಲಸಿಕೆ ಕೊಡಿಸಿ ಪೋಲಿಯೊ ಮುಕ್ತ ಭಾರತವನ್ನಾಗಿ ಮಾಡೋಣ ಎಂದರು.
ಜ.17ರಂದು ಬೆಳಗ್ಗೆ 10 ಗಂಟೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ಅಭಿಯಾನವನ್ನು ಬಿಬಿಎಂಪಿಯ ದಾಸಪ್ಪ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದರು.
ಈ ವೇಳೆ ಪೂರ್ವ ವಲಯದ ಜಂಟಿ ಆಯುಕ್ತ ಡಾ.ಯತೀಶ್ ಕುಮಾರ್ ಹಾಗೂ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







