ಭಾರತ-ಪಾಕ್ ಮಾತುಕತೆಗೆ ಬಾನ್ ಕಿ ಮೂನ್ ಬೆಂಬಲ
ನ್ಯೂಯಾರ್ಕ್, ಜ. 16: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದೀರ್ಘಾಕಾಲೀನ ವಿವಾದಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಮಾತುಕತೆಗಳನ್ನು ನಡೆಸಲು ನೆರವು ನೀಡುವ ಭರವಸೆಯನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ನೀಡಿದ್ದಾರೆ.
‘‘ಭಾರತ-ಪಾಕ್ ಮಾತುಕತೆಗಳನ್ನು ಚಾಲನೆಯಲ್ಲಿಡಲು ಮಹಾಕಾರ್ಯದರ್ಶಿಯವರ ನೆರವು ಯಾವತ್ತೂ ಇರುತ್ತದೆ’’ ಎಂದು ಅವರ ವಕ್ತಾರ ಸ್ಟ್ರಿಫಾನ್ ಡುಜಾರಿಕ್ ಶುಕ್ರವಾರ ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಈ ರೀತಿಯಾಗಿ ಉತ್ತರಿಸಿದರು.
‘‘ಎರಡು ದೇಶಗಳ ನಡುವೆ ವಿವಾದ ತಲೆದೋರಿರುವುದು ಹೌದು. ಆದರೆ, ತಮ್ಮ ನಡುವಿನ ಹಲವಾರು ವಿವಾದಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳ ನಾಯಕರ ನಡುವೆ ನಡೆಯುವ ಮಾತುಕತೆಗೆ ನಮ್ಮ ಬೆಂಬಲ ಯಾವತ್ತೂ ಇದೆ’’ ಎಂದು ಡುಜಾರಿಕ್ ನುಡಿದರು.
ಇಸ್ಲಾಮಾಬಾದ್‌ನಲ್ಲಿ ಈ ವಾರ ನಡೆಯಬೇಕಿದ್ದ ಭಾರತ-ಪಾಕ್ ವಿದೇಶ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಮುಂದೂಡಲು ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಒಪ್ಪಿಕೊಂಡಿವೆ.
ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.





