ಗೋಹತ್ಯೆಯ ಹೆಸರಲ್ಲಿ ಕುಟುಂಬಕ್ಕೆ ಜೀವ ಬೆದರಿಕೆ!

ಕ್ರಿಕೆಟಿಗ ಶಮಿ ತಂದೆಯ ಅಳಲು
ಶಮಿ ಸೋದರನನ್ನು ಸುಳ್ಳು ಕೇಸಿನಲ್ಲಿ ಬಂಧಿಸಿದ್ದ ಪೊಲೀಸರು!
ಮೀರತ್, ಜ.16: ಗೋಹತ್ಯೆಯನ್ನು ಬೆಂಬಲಿಸಿದ್ದೇವೆ ಎಂದು ಆರೋಪಿಸಿ, ಕೆಲವು ದುಷ್ಕರ್ಮಿಗಳು ತಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಲು ಸಂಚು ಹೂಡಿದ್ದಾರೆ ಎಂದು ಟೀಂ ಇಂಡಿಯಾ ವೇಗಿ ಮುಹಮ್ಮದ್ ಶಮಿ ಅವರ ತಂದೆ ಅಳಲು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ ಎಂದವರು ಆರೋಪಿಸಿದ್ದಾರೆ.
ಹಸೀಬ್, ಅಲ್ಲಿ ಸೇರಿದ್ದ ಇತರ ಅನೇಕರಂತೆ ಕೇವಲ ಪ್ರೇಕ್ಷಕನಾಗಿದ್ದನು. ಆತನನ್ನು ಅನಗತ್ಯವಾಗಿ ವಿವಾದದಲ್ಲಿ ಎಳೆಯಲಾಗಿದೆ. ಶಮಿ, ಟೀಂ ಇಂಡಿಯಗಾಗಿ ಆಡಲು ತೊಡಗಿದ ಮೇಲೆ ತಮಗೆ ದೊರಕಿರುವ ಪ್ರಚಾರದ ಕಾರಣದಿಂದಾಗಿ ಕೆಲವು ವ್ಯಕ್ತಿಗಳು ತಮ್ಮ ಕುಟುಂಬದ ಮೇಲೆ ದ್ವೇಷ ಬೆಳೆಸಿಕೊಂಡಿರುವುದರಿಂದಾಗಿ ಹೀಗಾಗಿದೆ. ಈ ವಿಚಾರವನ್ನು ತಾನು ಒಂದು ತಿಂಗಳ ಹಿಂದೆಯೇ ಜಿಲ್ಲಾ ದಂಡಾಧಿಕಾರಿಗೆ ವರದಿ ಮಾಡಿದ್ದೆ. ಈ ಬಂಧನ ಅದರ ಫಲಿತಾಂಶವಾಗಿದೆ. ‘ಗೋವಧೆ’ ಎಂಬ ಶಬ್ದವನ್ನು ತಮ್ಮ ಮೇಲೆ ಗುರಿಯಿಡಲು ಬಳಸಲಾಗುತ್ತಿದೆಯೆಂದು ಅವರು ದೂರಿದ್ದಾರೆ.
ಟಿಒಐ ಅಮ್ರೋಹಾ ಜಿಲ್ಲಾ ದಂಡಾಧಿಕಾರಿ ವೇದಪ್ರಕಾಶ್‌ರನ್ನು ಸಂಪರ್ಕಿಸಿದಾಗ, ಅಹ್ಮದ್, ತನ್ನನ್ನು ಒಂದು ತಿಂಗಳ ಹಿಂದೆ ಭೇಟಿಯಾಗಿದ್ದುದನ್ನು ಖಚಿತಪಡಿಸಿದ್ದಾರೆ.
ಕೆಲವರು ದೂರವಾಣಿಯಲ್ಲಿ ತನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆಂಬ ದೂರಿನೊಂದಿಗೆ ಅವರು ತನ್ನನ್ನು ಭೇಟಿಯಾಗಿದ್ದುದು ಸತ್ಯ. ಆದರೆ, ಬೆದರಿಕೆ ಹಾಕಿದವರು ಯಾರೆಂಬುದನ್ನು ಅವರು ಉಲ್ಲೇಖಿಸಿರಲಿಲ್ಲವೆಂದು ಅವರು ತಿಳಿಸಿದ್ದಾರೆ.
ಗೋಹತ್ಯೆ ಸಂಬಂಧ ಬೇಕಾಗಿದ್ದ ಒಬ್ಬ ವ್ಯಕ್ತಿಯ ಕುರಿತಾಗಿ ಗುರುವಾರ ಅಪರಾಹ್ಣ ದಿಡೋಲಿ ಪೊಲೀಸ್ ಠಾಣೆಯ ಅಧಿಕಾರಿ ಪ್ರವೀಣ್‌ಕುಮಾರ್‌ಗೆ ಮಾಹಿತಿಯೊಂದು ದೊರೆತಿತ್ತು. ಕುಮಾರ್ ನೇತೃತ್ವದ ತಂಡ ಆ ವ್ಯಕ್ತಿಯನ್ನು ಬಂಧಿಸಲೆಂದು ಹೋದಾಗ, ಹಸೀಬ್, ಪೊಲೀಸರ ಕರ್ತವ್ಯಕ್ಕೆ ತಡೆಯೊಡ್ಡಿದ್ದರು. ಅಲ್ಲದೆ ಸಬ್‌ಇನ್‌ಸ್ಪೆಕ್ಟರ್ ಪ್ರದೀಪ್ ಭಾರದ್ವಾಜರೊಂದಿಗೆ ಜಗಳಾಡಿ, ಅವರ ಸಮವಸ್ತ್ರವನ್ನೂ ಹರಿದಿದ್ದರು ಎನ್ನುವುದು ಪೊಲೀಸರ ಆರೋಪವಾಗಿದೆ.
ಬಳಿಕ ಪೊಲೀಸರು ಹಸೀಬ್‌ರನ್ನು ಬಂಧಿಸಿ, ಅವರ ವಿರುದ್ಧ ಆರೋಪ ದಾಖಲಿಸಿದ್ದರು.
ಗೋ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ, ರಿಜ್ವಾನ್ ಅಹ್ಮದ್ ಎಂಬಾತನನ್ನು ಒಯ್ಯುತ್ತಿದ್ದ ಪೊಲೀಸ್ ವಾಹನವನ್ನು ಹಸೀಬ್ ತಡೆದರು. ಸಬ್‌ಇನ್‌ಸ್ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್‌ಗಳು ಅವರನ್ನು ಎದುರಿಸಿದಾಗ, ಹಸೀಬ್ ವ್ಯಗ್ರರಾದರು. ತಾವು ಹಸೀಬ್ ವಿರುದ್ಧ ಐಪಿಸಿ ಸೆ.147(ದಂಗೆ), 148(ಮಾರಕಾಸ್ತ್ರ ಧರಿಸಿ ದಂಗೆ), 153(ವಿಭಿನ್ನ ಗುಂಪುಗಳ ನಡುವೆ ದ್ವೇಷಕ್ಕೆ ಪ್ರಚೋದನೆ), 332(ಸಾರ್ವಜನಿಕ ಸೇವಕರು ಕರ್ತವ್ಯ ನಡೆಸದಂತೆ ಸ್ವ ಇಚ್ಛೆಯಿಂದ ನೋವುಂಟು ಮಾಡುವುದು) ಹಾಗೂ 224(ತನ್ನ ಕಾನೂನು ಬದ್ಧ ಬಂಧನಕ್ಕೆ ಪ್ರತಿರೋಧ ಅಥವಾ ತಡೆಯೊಡ್ಡುವುದು) ಅನ್ವಯ ಎಫ್‌ಐಆರ್ ದಾಖಲಿಸಿದ್ದೇವೆ. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ಮಂಜೂರಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.







