ಸಂಶೋಧನೆಯ ಬರ ಮೇಕ್ ಇನ್ ಇಂಡಿಯಾಗೆ ಗರ ?
ಕಳೆದ ಹತ್ತು ವರ್ಷಗಳಿಂದೀಚೆಗೆ ದೇಶದಲ್ಲಿ ನೀಡಲಾಗುವ ಪ್ರತಿ ಆರು ಪೇಟೆಂಟ್‌ಗಳ ಪೈಕಿ ಒಂದು ಪೇಟೆಂಟ್ ಮಾತ್ರ ಭಾರತೀಯ ಸಂಶೋಧಕರಿಗೆ ಮಂಜೂರಾಗುತ್ತಿದ್ದು, ಇತರ ಐದು ಪೇಟೆಂಟ್‌ಗಳು ವಿದೇಶಿಯರ ಪಾಲಾಗುತ್ತಿವೆ. ಅಂದರೆ ಇತರ ವಿದೇಶಿ ಕಂಪೆನಿಗಳು ದೇಶದಲ್ಲಿ ತಮ್ಮ ಬೌದ್ಧಿಕ ಆಸ್ತಿಯ ಹಕ್ಕನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿವೆ ಎನ್ನುವುದು ಸ್ಪಷ್ಟ.
ಭಾರತ ಹೊಸ ತಂತ್ರಜ್ಞಾನ ಸೃಷ್ಟಿಯಲ್ಲಿ ಮತ್ತು ಹೊಸದನ್ನು ಶೋಧಿಸುವಲ್ಲಿ ಎಷ್ಟು ದುರ್ಬಲವಾಗಿದೆ ಎನ್ನುವುದನ್ನು ಹಲವು ಅಧ್ಯಯನಗಳು ತೋರಿಸಿವೆ. ಭಾರತ ಈ ಸಮಸ್ಯೆಯಿಂದ ಹೊರಬರಬೇಕಾದರೆ ಸಾಂಪ್ರದಾಯಿಕ ದೌರ್ಬಲ್ಯಗಳಿಂದ ಹೊರಬೇಕು ಎಂದು ನಾಲ್ಕು ಮಂದಿ ನೊಬೆಲ್ ಪುರಸ್ಕೃತರು ಸಲಹೆ ನೀಡಿದ್ದಾರೆ. ಮೋದಿಯವರ ಮಹತ್ವಾಕಾಂಕ್ಷಿ ‘ಮೇಕ್ ಇನ್ ಇಂಡಿಯಾ’ ಬಗ್ಗೆ ಪ್ರಸ್ತಾಪಿಸಿ, ಮೇಕ್ ಇನ್ ಇಂಡಿಯಾ ಯೋಜನೆಗೆ ಮೊದಲು ಕಂಪೆನಿಗಳು ಭಾರತದಲ್ಲಿ ಸಂಶೋಧನೆ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
‘‘ಹೊಸ ಸಂಶೋಧನೆಗಳು, ತಂತ್ರಜ್ಞಾನಗಳು, ಉತ್ಪನ್ನಗಳು ಜಾಗತಿಕ ವೇದಿಕೆಯಲ್ಲಿ ಪೈಪೋಟಿ ನಡೆಸಬೇಕಾದರೆ ಅವುಗಳು ಹೊಸ ಸಂಶೋಧನೆಯ ಆಧಾರದಲ್ಲಿ, ಪ್ರಕೃತಿಯ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಂಡು ಅದರ ಆಧಾರದಲ್ಲಿ ಸೃಷ್ಟಿಯಾದವುಗಳಾಗಿರಬೇಕು. ನಾವು ಮೂಲ ವಿಜ್ಞಾನ ಎಂದು ಕರೆಯುವ ಈ ಪರಿಕಲ್ಪನೆ ಕ್ರಮೇಣ ಅನ್ವಯಿಕ ವಿಜ್ಞಾನ ಹಾಗೂ ತಂತ್ರಜ್ಞಾನಗಳಾಗುತ್ತವೆ. ಆದ್ದರಿಂದ ನನ್ನ ಸಲಹೆ ಎಂದರೆ ನೀವು ‘ಮೇಕ್ ಇನ್ ಇಂಡಿಯಾ’ ಘೋಷಣೆಯನ್ನು ಬದಲಿಸಿ, ‘ಡಿಸ್ಕವರ್, ಇನ್ವೆಂಟ್ ಆ್ಯಂಡ್ ಮೇಕ್ ಇನ್ ಇಂಡಿಯಾ’ ಎಂದು ಮಾಡಿ.’’ ಎಂದು 2004ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಡೇವಿಡ್ ಗ್ರಾಸ್ ಸಲಹೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ ಜಾಗತಿಕ ಅನುಶೋಧನೆ ಸೂಚ್ಯಂಕದಲ್ಲಿ ಭಾರತಕ್ಕೆ ವಿಶ್ವದ 141 ದೇಶಗಳ ಪೈಕಿ 81ನೆ ರ್ಯಾಂಕಿಂಗ್ ಲಭಿಸಿದೆ.
ಅಂದರೆ ಭಾರತ ಹೊಸದಾಗಿ ಯಾವ ಸಂಶೋಧನೆಯನ್ನೂ ಕೈಗೊಳ್ಳುತ್ತಿಲ್ಲ ಎಂದರ್ಥ. ನಾವು ಕಡಿಮೆ ಸಾಧನೆ ಮಾಡಿದ್ದೇವೆ ಎಂದರೆ ಇದಕ್ಕೆ ಯಾರು ಹೊಣೆ?
ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರಿಗೆ 10,615 ಪೇಟೆಂಟ್‌ಗಳನ್ನು ಮಂಜೂರು ಮಾಡಲಾಗಿದೆ. ಇದು ಕೆಲ ಅಚ್ಚರಿದಾಯಕ ಹಾಗೂ ಅಷ್ಟೊಂದು ಅಚ್ಚರಿದಾಯಕವಲ್ಲದ ಹೆಸರುಗಳನ್ನು ಬಿಡುಗಡೆ ಮಾಡುತ್ತದೆ.
ಭಾರತದಲ್ಲಿ ಅತಿಹೆಚ್ಚು ಪೇಟೆಂಟ್ ಪಡೆದ ಸಂಸ್ಥೆಯೆಂದರೆ, ವಿಜ್ಞಾನ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್). ಇದು ಒಟ್ಟು 2,060 ಪೇಟೆಂಟ್‌ಗಳನ್ನು ಪಡೆದಿದೆ. ಪಟ್ಟಿಯಲ್ಲಿರುವ ಇತರ ಹೆಸರುಗಳು ದೇಶದ ದೊಡ್ಡ ಸಾರ್ವಜನಿಕ ಹಾಗೂ ಖಾಸಗಿ ವಲಯದ ಕಂಪೆನಿಗಳು.
ದೇಶದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಹಾಗೂ ಸ್ಯಾಮ್‌ಸಂಗ್‌ನಂಥ ಬಹುರಾಷ್ಟ್ರೀಯ ಸಂಸ್ಥೆಗಳ ಪ್ರಬಲ ಅಸ್ತಿತ್ವವಿದ್ದು, ಇವು ಭಾರತದಲ್ಲಿ ಎಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಮಾಡುತ್ತವೆ ಎನ್ನುವುದನ್ನು ಸೂಚಿಸುತ್ತವೆ.
ಸಿಎಸ್‌ಐಆರ್‌ನ 38 ಪ್ರಯೋಗಾಲಯಗಳ ಪೈಕಿ, ಮಹಾರಾಷ್ಟ್ರದ ಪುಣೆಯಲ್ಲಿರುವ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ ಅತಿಹೆಚ್ಚು ಅಂದರೆ 334 ಪೇಟೆಂಟ್‌ಗಳನ್ನು ಪಡೆದಿದೆ. ಇದು ಸಿಎಸ್‌ಐಆರ್‌ನ ಒಂದು ಭಾಗವಾಗಿರದಿದ್ದರೆ, ದೇಶದಲ್ಲಿ ಅತಿಹೆಚ್ಚು ಪೇಟೆಂಟ್ ಪಡೆದ ಸಂಸ್ಥೆಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿರುತ್ತಿತ್ತು.
ಸರಕಾರಿ ಪ್ರಯತ್ನ
ಇಷ್ಟರಲ್ಲೇ ಹೊಸ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ನೀತಿ ಘೋಷಣೆ ಯಾಗಲಿದೆ. ಇದರ ಕರಡನ್ನು ಪರಿಶೀಲಿಸಿದರೆ, ಈ ನೀತಿಯಡಿ ಬೌದ್ಧಿಕ ಆಸ್ತಿಯ ಸೃಷ್ಟಿ ಹಾಗೂ ವಾಣಿಜ್ಯೀಕರಣವನ್ನು ಗಣನೀಯವಾಗಿ ವಿಸ್ತರಿಸಲು ಉದ್ದೇಶಿಸಲಾಗಿದೆ.
ಹೊಸ ನೀತಿಯು ಮುಂದಿನ ಹತ್ತು ವರ್ಷಗಳಲ್ಲಿ ಭಾರತವನ್ನು ಸಂಶೋಧನೆಯ ಆರ್ಥಿಕತೆಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ದೃಷ್ಟಿ ಕೋನದ ದಾಖಲೆಯಾಗಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯ ಕಾರ್ಯ ದರ್ಶಿ ಅಮಿತಾಭ್ ಕಾಂತ್ ಕಳೆದ ತಿಂಗಳು ಅಭಿಪ್ರಾಯಪಟ್ಟಿದ್ದರು.
ಕರಡು ನೀತಿಯಲ್ಲಿ ಇರುವ ಕೆಲ ಪ್ರಮುಖ ಅಂಶಗಳ ಪ್ರಕಾರ, ಸರಕಾರಿ ನೆರವಿನ ಸಂಶೋಧನಾ ಸಂಸ್ಥೆಗಳು ಹೆಚ್ಚು ಹೆಚ್ಚು ಬೌದ್ಧಿಕ ಆಸ್ತಿ ಸೃಷ್ಟಿಸಲು ಮುಂದಾಗಬೇಕು. ಇದಕ್ಕಾಗಿ ಸಾಧನೆಯ ಮಾಪಕ ಇರಬೇಕು. ಅಂದರೆ ಈ ಸಂಸ್ಥೆ ಹೇಗೆ ಸಾಧನೆ ಮಾಡುತ್ತಿದೆ ಎಂದು ಅಳೆಯುವ ಪದ್ಧತಿ ಜಾರಿಯಾಗಬೇಕು. ಇದರ ಅಂಶಗಳಲ್ಲಿ ಕೈಗಾರಿಕೆ ಹಾಗೂ ಶೈಕ್ಷಣಿಕ ವ್ಯವಸ್ಥೆ ನಡುವೆ ಉತ್ತಮ ಸಂವಾದ ಬೆಳೆಯಬೇಕು ಎನ್ನುವುದಾಗಿದೆ.
ಸಿಎಸ್‌ಐಆರ್‌ನಂಥ ಪ್ರಯೋಗಾಲಯ ಗಳು ಹೆಚ್ಚು ಸಂಶೋಧನೆ ನಡೆಸಲು ಮತ್ತು ಪೇಟೆಂಟ್ ಪಡೆಯಲು ಸರಕಾರ ಪ್ರಯತ್ನ ನಡೆಸುತ್ತಿರುವುದು ಇದೇ ಮೊದಲಲ್ಲ. ‘ದ ಯುಟಿಲೈಸೇಷನ್ ಆಫ್ ಪಬ್ಲಿಕ್ ಪಂಡೆಡ್ ಇಂಟಲೆಕ್ಚುವಲ್ ಪ್ರಾಪರ್ಟಿ’ ಮಸೂದೆಯನ್ನು 2009ರಲ್ಲಿ ಮಂಡಿಸಲಾಗಿದ್ದು, ಇದು ಕೂಡಾ ಇಂಥದ್ದೇ ಗುರಿ ಹೊಂದಿತ್ತು. ಆದರೆ ಮಸೂದೆ ಹೇಗೆ ಪೇಟೆಂಟ್ ಪಡೆಯುವುದನ್ನು ಕಡ್ಡಾಯ ಮಾಡಲು ಸಾಧ್ಯ ಎಂಬ ಬಗ್ಗೆ ವಿರೋಧವಿತ್ತು ಹಾಗೂ ಇದು ಹೇಗೆ ಸಾರ್ವಜನಿಕ ನೆರವಿನ ಸಂಸ್ಥೆಗಳು ತಮ್ಮ ಪೇಟೆಂಟ್‌ನ ಮೇಲೆ ವಿಶೇಷ ಲೈಸನ್ಸ್ ಪಡೆಯಲು ಹೇಗೆ ಸಾಧ್ಯ ಎಂಬ ಅಂಶದ ಬಗ್ಗೆಯೂ ವಿರೋಧ ಕಂಡುಬಂತು. ಇಂಥ ಪೇಟೆಂಟ್‌ಗಳು ಮತ್ತೆ ಏಕಸ್ವಾಮ್ಯಕ್ಕೆ ಕಾರಣವಾಗುತ್ತವೆ ಎನ್ನುವುದು ವಾದವಾಗಿತ್ತು.
ಇದು ವಿಸ್ತೃತ ನೈತಿಕ ವಿಷಯವಾಗಿದ್ದು, ಸರಕಾರಿ ನೆರವನ್ನು ಪಡೆಯುವ ಸಂಸ್ಥೆಗಳು ತಮ್ಮ ಸಂಶೋಧನೆಯ ಮೂಲಕ ಖಾಸಗಿ ವಲಯದ ಕಂಪೆನಿಗಳು ಲಾಭ ಪಡೆಯಲು ಅವಕಾಶ ನೀಡಲು ಹೇಗೆ ಸಾಧ್ಯ. ಇದು ಸರಿಯಲ್ಲ ಎನಿಸುತ್ತದೆ.
‘‘ಈ ಮಸೂದೆಯ ಅನ್ವಯ ಸಂಶೋಧನೆಗಳಿಗೆ ಸಮರ್ಪಕ ಪರಿಹಾರವನ್ನು ನೀಡಿದಾಗ ಮಾತ್ರ ಅದು ಬೌದ್ಧಿಕ ಆಸ್ತಿಯ ಹಕ್ಕು ಹಾಗೂ ಹಣ ಎನಿಸುತ್ತದೆ....ಆದರೆ ಸಾರ್ವಜನಿಕ ವಲಯದ ಸಂಶೋಧಕ ತನ್ನ ಸಂಶೋಧನೆಯನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡುವುದು ಸಾಮಾಜಿಕ ಬದ್ಧತೆಗೆ ಮಾಡುವ ವಂಚನೆ ಎನಿಸುತ್ತದೆ’’ ಎಂದು ಹೊಸದಿಲ್ಲಿ ಮೂಲದ ಕಾನೂನು ಹೋರಾಟಗಾರ್ತಿ ಶಾಲಿನಿ ಭೂತನಿ ಹಿಂದೂ ಪತ್ರಿಕೆ ಅಂಕಣದಲ್ಲಿ ವಾದಿಸಿದ್ದರು.
ಈ ಮಸೂದೆಯನ್ನು 2014ರಲ್ಲಿ ವಾಪಸು ಪಡೆಯಲಾಯಿತು.
ಹನ್ನೆರಡನೆ ಪಂಚವಾರ್ಷಿಕ ಯೋಜನೆಯಲ್ಲಿ (2012-2017) ಪೇಟೆಂಟ್ ಸ್ವಾಧೀನ ಹಾಗೂ ಸಹಭಾಗಿತ್ವದ ಸಂಶೋಧನೆ ತಂತ್ರಜ್ಞಾನ ಅಭಿವೃದ್ಧಿ ಯೋಜನೆಯ ಉಲ್ಲೇಖವಿದೆ. ಭಾರತೀಯ ಕಂಪೆನಿಗಳು ಹೊಸ ತಂತ್ರಜ್ಞಾನವನ್ನು ಸಂಶೋಧಕರಿಂದ ಪಡೆಯುವ ಮೂಲಕ ಮೇಕ್ ಇನ್ ಇಂಡಿಯಾ ಗುರಿಯತ್ತ ಮುನ್ನಡೆಯಲು ಸಹಾಯ ನೀಡುವ ಯೋಜನೆ ಇದಾಗಿದೆ.
ರೂಪುಗೊಳ್ಳುತ್ತಿರುವ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಪ್ರಾತ್ಯಕ್ಷಿಕೆಯನ್ನು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತೀಯರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪಿಎಸಿಇ ಅಗತ್ಯ ಸಹಾಯ ನೀಡುತ್ತದೆ.
ಬೌದ್ಧಿಕ ಆಸ್ತಿ ಹಕ್ಕು ವಿಚಾರದಲ್ಲಿ ನಾವು ವಿಶ್ವದಲ್ಲಿ ವಿಶ್ವಾಸ ಮೂಡಿಸಿದರೆ, ಜಾಗತಿಕವಾಗಿ ಸೃಜನಾತ್ಮಕ ಕೆಲಸಕ್ಕೆ ಭಾರತ ಕೇಂದ್ರವಾಗಬಲ್ಲದು ಎಂದು ಮೋದಿ ಕಳೆದ ಎಪ್ರಿಲ್‌ನಲ್ಲಿ ಭಾಷಣವೊಂದರಲ್ಲಿ ಹೇಳಿದ್ದರು. ಆದರೆ ಪೇಟೆಂಟ್ ವಾಣಿಜ್ಯೀಕರಣ ಇನ್ನೊಂದು ಸಮಸ್ಯೆ.
ಕಳೆದ ತಿಂಗಳು ನಡೆದ ಸಭೆಯೊಂದರಲ್ಲಿ ಕಾಂತ್, ಒಟ್ಟು ಪಡೆದ ಪೇಟೆಂಟ್‌ಗಳ ಪೈಕಿ ಹೇಗೆ ಐದು ಮಾತ್ರ ವಾಣಿಜ್ಯೀಕರಣಗೊಳ್ಳುತ್ತಿವೆ ಎಂಬ ಅಂಶದ ಬಗ್ಗೆ ಗಮನ ಸೆಳೆದಿದ್ದರು. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಹೆಚ್ಚು ಸಾಂಸ್ಥಿಕ ಸಂಶೋಧನೆಗಳು ಕೈಗಾರಿಕೆಗಳ ಅನ್ವಯಿಕೆಗೆ ಯೋಗ್ಯವಾಗಿರುವುದಿಲ್ಲ. ಬದಲಾಗಿ ಇಂಥ ಸಂಶೋಧನೆಗಳು ಶೈಕ್ಷಣಿಕ ನಿಯತಕಾಲಿಕಗಳಲ್ಲಿ ಪ್ರಕಟಗೊಳ್ಳುವುದನ್ನು ಗುರಿಯಾಗಿರಿಸಿಕೊಳ್ಳುತ್ತವೆ ಎಂದು ಮಿಂಟ್ ವರದಿ ಹೇಳಿದೆ.
ಇದಕ್ಕೆ ವಿರೋಧವಾದ ವಾದವೂ ಇದೆ. ಅದೆಂದರೆ, ಪೇಟೆಂಟ್ ವ್ಯವಸ್ಥೆ ಅನುಶೋಧನೆಗೆ ಮಾರಕ ಎಂದು ಈ ಮಂದಿ ವಾದಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಅನುಶೋಧನೆಗೆ ಮಾರಕವಾಗುತ್ತದೆ’’ ಎಂದು ಮಾಹಿತಿ ತಂತ್ರಜ್ಞಾನ ಕಂಪೆನಿಯಾದ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕ ಅಭಿಪ್ರಾಯಪಡುತ್ತಾರೆ. ಪೇಟೆಂಟ್ ಎನ್ನುವುದು ಸಾಫ್ಟ್‌ವೇರ್ ಉದ್ಯಮಕ್ಕೆ ಪೀಡೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಭಾರತದ ಪೇಟೆಂಟ್ ಆಫೀಸ್ 2015ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ ಮಾರ್ಗಸೂಚಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದು ಅರ್ಥಹೀನ ಎನ್ನುವಷ್ಟರ ಮಟ್ಟಿಗೆ ಇದನ್ನು ದೂಷಿಸಲಾಗಿದೆ. ಈ ನಿಯಮಾವಳಿ ಅನ್ವಯ ಅಲ್ಗೊರಿಥಮ್ ಅಥವಾ ಸಾಫ್ಟ್‌ವೇರ್‌ಗೆ ಪೇಟೆಂಟ್ ಪಡೆದುಕೊಳ್ಳಬಹುದಾಗಿದೆ. ಇಂಥ ಪೇಟೆಂಟ್‌ನಿಂದ ಇತರ ಕಂಪೆನಿಗಳು ರಾಜಧನ ಅಥವಾ ಲೈಸನ್ಸ್ ಶುಲ್ಕವನ್ನು ಹೇರಲು ಅವಕಾಶವಾಗುತ್ತದೆ.
ಹೆಚ್ಚುವರಿ ವೆಚ್ಚದ ಹೊರತಾಗಿಯೂ, ಆಕಸ್ಮಿಕವಾಗಿ ಈ ವಿಧಾನವನ್ನು ಬಳಸಿದಲ್ಲಿ, ಕಂಪೆನಿಗಳು ಅದರಲ್ಲೂ ಮುಖ್ಯವಾಗಿ ಹೊಸ ಕಂಪೆನಿಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
‘‘ಭಾರತೀಯ ಉದ್ಯಮಶೀಲರು ಸಂಶೋಧನೆಗಳ ಬಗ್ಗೆ ದೃಷ್ಟಿ ಹರಿಸಬೇಕೇ ವಿನಃ ದಾವೆಗಳ ಮೇಲಲ್ಲ’’ ಎಂದು ಸಾಫ್ಟ್‌ವೇರ್ ಉತ್ಪನ್ನಗಳ ಚಿಂತಕ ಚಾವಡಿ ಐ-ಸ್ಪಿರಿಟ್‌ನ ವೆಂಕಟೇಶ್ ಹರಿಹರನ್ ಹೇಳುತ್ತಾರೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಸಾಫ್ಟ್‌ವೇರ್ ಜಗತ್ತು ಎಷ್ಟು ಕ್ಷಿಪ್ರವಾಗಿ ಬದಲಾಗುತ್ತಿದೆ ಎನ್ನುವುದು. ಸಾಫ್ಟ್‌ವೇರ್‌ಗಳಿಗೆ 20 ವರ್ಷದ ಅವಧಿಗೆ ಪೇಟೆಂಟ್ ನೀಡುವುದು ಅರ್ಥಹೀನ ಮತ್ತು ಇದು ಸಂಶೋಧನೆಯನ್ನು ನಿಧಾನಗೊಳಿಸುತ್ತದೆ. ಇಂಥ ವಿರೋಧಗಳ ಹಿನ್ನೆಲೆಯಲ್ಲಿ ಭಾರತದ ಪೇಟೆಂಟ್ ಕಚೇರಿ ಈ ಮಾರ್ಗದರ್ಶಿ ಸೂತ್ರವನ್ನು ಅಮಾನತಿನಲ್ಲಿಟ್ಟಿದೆ.
ಕೇವಲ ಸಾಫ್ಟ್‌ವೇರ್ ಉದ್ಯಮದ ಪೇಟೆಂಟ್‌ಗಳ ಬಗ್ಗೆ ಮಾತ್ರ ಜನ ಮರುಚಿಂತನೆ ಮಾಡುತ್ತಿಲ್ಲ. ಅಮೆರಿಕದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪೆನಿ ತೆಸ್ಲಾ, ತನ್ನ ಪೇಟೆಂಟನ್ನು ಮುಕ್ತ ಬಳಕೆಗೆ ಅವಕಾಶ ನೀಡುವ ಮೂಲಕ ವಿಶಿಷ್ಟ ಹೆಜ್ಜೆ ಇರಿಸಿದೆ. ಇದರ ಬಳಕೆಯಿಂದ ಎಲೆಕ್ಟ್ರಿಕ್ ಕಾರು ಉದ್ಯಮದಲ್ಲಿ ಸಂಶೋಧನೆಗಳು ವೇಗ ಪಡೆಯಬಹುದು ಎನ್ನುವುದು ಅದರ ನಿರೀಕ್ಷೆ.
ಎಷ್ಟು ಕಡಿಮೆ ಕಂಪೆನಿಗಳು ಈ ಮಾರ್ಗ ಅನುಸರಿಸಿವೆ ಎಂಬ ಹಿನ್ನೆಲೆಯಲ್ಲಿ, ಮುಕ್ತ ಪೇಟೆಂಟಿನ ಕಲ್ಪನೆಯ ಸಮಯ ಬಂದಿದೆಯೇ ಎಂದು ಹೇಳುವುದು ಕಷ್ಟ.
ಕೃಪೆ: ಸ್ಕ್ರಾಲ್.ಇನ್