ಆಮಿರ್ ಖಾನ್‌ರ ಚಿತ್ರಕ್ಕೆ ‘ಚಿಕಿತ್ಸೆ’ಅಗತ್ಯ: ಬಿಜೆಪಿ ನಾಯಕನಿಂದ ಬೆದರಿಕೆ
ಇಂದೋರ್, ಜ.15: ದೇಶದಲ್ಲಿ ಅಸಹಿಷ್ಣುತೆ ಗೋಚರಿಸುತ್ತಿದೆಯೆಂಬ ನಟ ಆಮಿರ್ ಖಾನ್‌ರ ಟೀಕೆಗಾಗಿ, ಅವರ ಮುಂದಿನ ‘ದಂಗಲ್’ ಚಿತ್ರಕ್ಕೆ ‘ಚಿಕಿತ್ಸೆ’ ಅಗತ್ಯವಿದೆಯೆಂದು ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಶುಕ್ರವಾರ ಹೇಳಿದ್ದಾರೆ.
ನಮ್ಮ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆಯೆಂದು ಯಾರಾದರೂ ಹೇಳಿದರೆ, ಅದು ತನಗೆ ಸ್ವಲ್ಪ ಸಿಟ್ಟನ್ನು ತರಿಸುತ್ತದೆ. ಆ ಬಳಿಕ ಆತನಿಗೆ ಚಿಕಿತ್ಸೆ ಮಾಡಬೇಕಾಗುತ್ತದೆ. ಅವನಿಗೆ ಚಿಕಿತ್ಸೆ ಅತಿ ಅಗತ್ಯವೆಂದು ಅವರು ಹೇಳಿದರೆಂದು ಪಿಟಿಐ ವರದಿ ಮಾಡಿದೆ.
ಶಾರುಕ್‌ಖಾನರನ್ನಾಗಲಿ, ಭಾರತದಲ್ಲಿ ಅಸಹಿಷ್ಣುತೆಯ ಕುರಿತಾದ ಅವರ ಹೇಳಿಕೆಗಾಗಿ ಪ್ರತಿಭಟನೆ ಎದುರಿಸಿದ್ದ ಅವರ ‘ದಿಲ್‌ವಾಲೆ’ ಚಿತ್ರವನ್ನಾಗಲಿ ಹೆಸರಿಸದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯವರ್ಗೀಯ, ಅಂತಹದೇ ಸಂದೇಶವನ್ನು ಆಮಿರ್‌ಖಾನರಿಗೂ ಕಳುಹಿಸಬೇಕಾಗಿದೆ ಎಂದಿದ್ದಾರೆ.
ಒಬ್ಬನಿಗೆ ಚಿಕಿತ್ಸೆ ನಡೆದಿದೆ. ಈಗ ಇನ್ನೊಬ್ಬನಿಗೂ ಚಿಕಿತ್ಸೆ ನೀಡುವ ಸಮಯ ಬಂದಿದೆ. ಡಾಂಗಲ್ ಮೇ ಮಂಗಲ್ ಕರ್ನಾ ಹೈ. ಇದನ್ನು ಎಲ್ಲರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದವರು ಇಂದೋರ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದಾರೆ.
ವಿಜಯವರ್ಗೀಯ ಈ ಹಿಂದೊಮ್ಮೆ ಶಾರುಕ್‌ಖಾನರನ್ನು ‘ದ್ರೋಹಿ’ ಎಂದು ಕರೆದಿದ್ದರು. ಸಾರ್ವಜನಿಕ ಆಕ್ರೋಶದ ಬಳಿಕ ಅವರದನ್ನು ಹಿಂದೆ ಪಡೆದಿದ್ದರು.





