ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ: ಸಚಿವ ಪರಮೇಶ್ವರ್ ವಿಷಾದ

ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು: ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ದೇಶದಲ್ಲಿ ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಎತ್ತಿಹಿಡಿದ ಡಾ.ಬಾಬಾ ಸಾಹೇಬ ರಚಿಸಿದ ಸಂವಿಧಾನವಿದ್ದರೂ ಅಸಹಿಷ್ಣುತೆ ವಾತಾವರಣ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕರ್ನಾಟಕ ಪ್ರಾಂತೀಯ ಕೆಥೊಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶನಿವಾರ ನಗರದಲ್ಲಿ ನಡೆದ 2016ನೆ ಸಾಲಿನ ಸಂದೇಶ ಪ್ರಶಸ್ತಿಯನ್ನು ಎಂಟು ಮಂದಿ ಸಾಧಕರಿಗೆ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಭಾರತದಲ್ಲಿ ಜಾತಿಯ ಆಧಾರದಲ್ಲಿ ಕಂದರ ಸೃಷ್ಟಿಸಿದವರು, ಧರ್ಮಗಳ ನಡುವೆ ವೈಷಮ್ಯವನ್ನುಂಟು ಮಾಡಿದವರು, ನಾವು ಏನನ್ನು ತಿನ್ನಬೇಕು, ಏನನ್ನು ಉಡಬೇಕು, ಏನು ಮಾಡಬೇಕು ಎನ್ನುವುದನ್ನು ನಿಯಂತ್ರಿಸಲು ಹೊರಟಿದ್ದಾರೆ. ಆದರೆ ಇದನ್ನು ಈ ದೇಶದ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಭಾರತೀಯರಿಗೆ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ನೀಡಿದೆ. ಬದುಕಲು ಮುಕ್ತ ಅವಕಾಶವನ್ನು ನೀಡಿದೆ ಈ ಆಶಯಗಳನ್ನೇ ಬಲಿಕೊಡುವ ಪ್ರಯತ್ನ ನಡೆಯುತ್ತಿರುವುದು ಕಳವಳಕಾರಿಯಾಗಿದೆ ಎಂದ ಸಚಿವ ಪರಮೇಶ್ವರ, ಈ ನಿಟ್ಟಿನಲ್ಲಿ ಕಲೆ ಸಂಸ್ಕೃತಿಯ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಸಂದೇಶ ಸಂಸ್ಥೆಯ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಗ್ಲಾಡಿಸ್ ರೇಗೊ, ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಸುಗಂಥಾ ಸತೀಯರಾಜ್, ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಯನ್ನು ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿಯನ್ನು ದೇವದಾಸ್ ಕಾಪಿಕಾಡ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಜೊಯೆಲ್ ಪಿರೇರಾ, ಸಂದೇಶ ಕಲಾ ಪ್ರಶಸ್ತಿಯನ್ನು ಉಸ್ತಾದ್ ರಫೀಕ್ ಖಾನ್, ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಥಾಮಸ್ ಡಿಸೋಜ, ಸಂದೇಶ ವಿಶೇಷ ಪ್ರಶಸ್ತಿಯನ್ನು ಜಿ.ಎಸ್.ಜಯದೇವ ಅವರಿಗೆ ನೀಡಿ ಗೌರವಿಸಲಾಯಿತು.
ಬೆಂಗಳೂರು ಕೆಥೊಲಿಕ್ ಕ್ರೈಸ್ತ ಮಹಾ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ವಂ.ಬರ್ನಾಡ್ ಮೊರಾಸ್, ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಅಧ್ಯಕ್ಷ ವಂ.ಅಲೋಶಿಯಸ್ ಪಾವ್ಲ್ ಡಿಸೋಜ, ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ.ಜೆರಾಲ್ಡ್ ಐಸಾಕ್ ಲೋಬೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ನಾ.ಡಿಸೋಜ, ಸಂದೇಶ ಪ್ರತಿಷ್ಠಾನದ ಟ್ರಸ್ಟಿ ವಂ.ಐವನ್ ಪಿಂಟೊ, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ವಿಕ್ಟರ್ ವಿಜಯ್ ಲೋಬೊ ಸ್ವಾಗತಿಸಿದರು.







