ಅಲಿಗಢ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನ ಕಸಿಯಲು ಸಂಚು: ನದ್ವಿ ಆರೋಪ
ಭಟ್ಕಳ: ಅಲಿಗಢ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ರದ್ದುಪಡಿಸಲು ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನವು ಅಲ್ಪಸಂಖ್ಯಾತರ ಸಂವಿಧಾನದತ್ತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯ ಅಧ್ಯಕ್ಷ ವೌಲಾನಾ ಸೈಯದ್ ರಾಬೆಅ್ ಹಸನಿ ನದ್ವಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,‘‘ಅಲಿಗಢ ವಿಶ್ವವಿದ್ಯಾನಿಲಯವನ್ನು ಮುಸ್ಲಿಮರು ಆರಂಭಿಸಿದ್ದು ಮಾತ್ರವಲ್ಲ, ಅದು ಸುಗಮವಾಗಿ ನಡೆಯುವಂತೆ ಮಾಡಲು ಅವರು ಅಪಾರ ತ್ಯಾಗ ಕೂಡಾ ಮಾಡಿದ್ದಾರೆ. ಈ ವಿಶ್ವವಿದ್ಯಾನಿಲಯವು ಅವರ ತ್ಯಾಗಗಳ ಸಂಕೇತವಾಗಿದೆ. ಸರಕಾರವು ಅದನ್ನು ಕಸಿದುಕೊಳ್ಳಕೂಡದು. ಒಂದು ವೇಳೆ ಸರಕಾರವು ಅಲಿಗಢ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು, ದೃಢಪಡಿಸಲು ವಿಫಲವಾದಲ್ಲಿ ಎಐಎಂಪಿಎಲ್‌ಬಿ ಪ್ರತಿಭಟನೆ ನಡೆಸಲಿದೆ’ ಎಂದವರು ಹೇಳಿದ್ದಾರೆ.
‘‘ಹಾಲಿ ಕೇಂದ್ರ ಸರಕಾರವು ಅಲ್ಪಸಂಖ್ಯಾತರ ಬಗ್ಗೆ ಅಸಹಿಷ್ಣುತೆಯನ್ನು ಹೊಂದಿದೆಯೆಂಬ ಸಾರ್ವತ್ರಿಕ ಭಾವನೆಯಿದೆ. ಆದರೆ ಸರಕಾರವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ಅದು ನಿಜಕ್ಕೂ ಅಲ್ಪಸಂಖ್ಯಾತರ ವಿರುದ್ಧ ಅಸಹಿಷ್ಣುತೆಯನ್ನು ಹೊಂದಿರದಿದ್ದಲ್ಲಿ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಹಕ್ಕುಗಳನ್ನು ಅವರಿಗೆ ನೀಡಬೇಕು. ಅಲಿಗಢ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ದೃಢಪಡಿಸುವಂತಹ ಕ್ರಮಗಳಿಂದ ಅದು ತನ್ನ ಮೇಲಿರುವ ಅಸಹಿಷ್ಣುತೆಯ ಆರೋಪದಿಂದ ಮುಕ್ತವಾಗಬೇಕು’ ಎಂದು ನದ್ವಿ ಹೇಳಿದ್ದಾರೆ.
ವಿವಿಧ ತೀವ್ರವಾದಿ ಸಂಘಟನೆಗಳು ಅಲ್ಪಸಂಖ್ಯಾತರ ವಿರುದ್ಧ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ಪ್ರಬುದ್ಧ ಹಾಗೂ ವಿಮರ್ಶಾತ್ಮಕತೆಯಿಂದ ವರ್ತಿಸಲು ಎಐಎಂಪಿಎಲ್‌ಬಿ ನಿರ್ಧರಿಸಿದೆ ಎಂದ ಅವರು, ‘‘ಭಾರತದಲ್ಲಿ ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆಯ ಭಾವನೆಯನ್ನು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ನಾವು ಅಂತಹ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತೇವೆ ಹಾಗೂ ಜಾಗರೂಕತೆಯಿಂದ ಅವುಗಳನ್ನು ವಿಶ್ಲೇಷಿಸುತ್ತೇವೆ. ಆದಾಗ್ಯೂ, ಅಗತ್ಯ ಸಂದರ್ಭಗಳಲ್ಲಿ ಮಾತ್ರವೇ ನಾವು ಸರಕಾರದ ಜೊತೆ ಈ ಬಗ್ಗೆ ಮಾತನಾಡುತ್ತೇವೆ’’ ಎಂದು ಸ್ಪಷ್ಟಪಡಿಸಿದರು.
ರಾಮಜನ್ಮಭೂಮಿ ವಿವಾದವನ್ನು ಕೆದಕಲು ಸಂಘ ಪರಿವಾರ ನಡೆಸುತ್ತಿರುವ ಪ್ರಯತ್ನಗಳನ್ನು ಉಲ್ಲೇಖಿಸಿದ ಅವರು, ‘‘ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿದ್ದು, ತಡೆಯಾಜ್ಞೆ ಜಾರಿಯಲ್ಲಿದೆ. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ತೀವ್ರವಾದಿ ಹಾಗೂ ದ್ವೇಷಪೂರಿತ ಹೇಳಿಕೆಗಳಿಗೆ ಅಂಜಲಾರೆವು’’ಎಂದು ಹಸಾನಿ ನದ್ವಿ ತಿಳಿಸಿದರು.







