ಅಸಹಿಷ್ಣುತೆಗೆ ಮಧ್ಯಪ್ರದೇಶದ ಘಟನೆ ಸಾಕ್ಷಿ: ಪಿಣರಾಯಿ ವಿಜಯನ್

ಕಾಸರಗೋಡು: ದೇಶದಲ್ಲಿ ಅಸಹಿಷ್ಣುತೆ ಬೆಳೆಯುತ್ತಿದೆ ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಘಟನೆ ಸಾಕ್ಷಿ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಪಿಣರಾಯಿ ವಿಜಯನ್ ಹೇಳಿದರು.
ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರೈಲಿನಲ್ಲಿ ಗೋಮಾಂಸದ ಆರೋಪ ಹೊರಿಸಿ ದಂಪತಿ ಮೇಲೆ ಹಲ್ಲೆ ನಡೆಸಿ ಅವರ ಬ್ಯಾಗ್‌ಗಳನ್ನೂ ತಪಾಸಣೆ ನಡೆಸುವ ಮೂಲಕ ಸಂಘ ಪರಿವಾರ ನರೇಂದ್ರ ಮೋದಿಯವರ ನಿರ್ದೇಶನದಂತೆ ನಡೆಯುತ್ತಿದೆ. ನಾವು ಏನು ತಿನ್ನುತ್ತೇವೆ ಎಂದು ನೋಡಲು ಈ ಹಿಂದೆ ಅಡುಗೆ ಕೋಣೆಗಳಿಗೆ ನುಗ್ಗುತ್ತಿದ್ದ ಸಂಘಪರಿವಾರ ಈಗ ಸಂಚಾರ ಸ್ವಾತಂತ್ರ್ಯಕ್ಕೂ ಅಡ್ಡಿಪಡಿಸುತ್ತಿದೆ. ಪ್ರಯಾಣಿಕರ ಬ್ಯಾಗ್‌ನಲ್ಲಿ ಏನಿದೆ ಎಂಬುದನ್ನು ತಪಾಸಣೆಗೆ ಹೊರಟಿದೆ. ಇದರಿಂದ ಜನಸಾಮಾನ್ಯರು ಭೀತಿಯಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೇರಳದಲ್ಲಿ ಸಂಘ ಪರಿವಾರ, ಬಿಜೆಪಿ ಬೇರೂರಲು ಕೇರಳದ ಜಾತ್ಯತೀತ ಮನಸ್ಸು ಎಂದಿಗೂ ಅವಕಾಶ ನೀಡಲಾರರು. ಉಮ್ಮನ್ ಚಾಂಡಿ ನೇತೃತ್ವದ ಸರಕಾರ ಕಳೆದ ಐದು ವರ್ಷಗಳ ಕಾಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಂದಿನ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.





