ಮೂಡುಬಿದಿರೆ: ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮೂಡುಬಿದಿರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪೋಲಿಯೊ ನಿರ್ಮೂಲನೆಗಾಗಿ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಮೂಡುಬಿದಿರೆ ಪುರಸಬಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ರವಿವಾರ ಮುಂಜಾನೆ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ಪೂರ್ಣ ದೃಷ್ಟಿಯಿಂದ ಹಾಗೂ ಪೋಲಿಯೊಮುಕ್ತ ರಾಷ್ಟ್ರಕ್ಕಾಗಿ ಮಕ್ಕಳಿಗೆ 2 ಹನಿ ಪೊಲೀಯೊ ಲಸಿಕೆಯನ್ನು ಹಾಕಲಾಗುತ್ತಿದೆ. ಹೆತ್ತವರು ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಹೇಳಿದರು. ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ನವೀನ್ ಕುಲಾಲ್, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ, ಪುರಸಭಾ ಸದಸ್ಯ ಪಿ.ಕೆ.ಥೋಮಸ್, ಕಾರ್ಯದರ್ಶಿ ಸುರೇಶ್ ಜೈನ್ ಮತ್ತು ಸದಸ್ಯರು, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳಾದ ಸಿ.ಎಚ್ ಗಫೂರ್, ಪ್ರೇಮಶ್ರೀ ಕಲ್ಲಬೆಟ್ಟು, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಶಶಿಕಲಾ, ಡಾ.ಜ್ಞಾನೇಶ್ ಕಾಮತ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ, ಹಿರಿಯ ಮಹಿಳಾ ಸಹಾಯಕಿ ರವಿಕಲಾ ಮತ್ತು ಸಿಬಂದಿವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





