ಸುಪ್ರೀಂ ನಿಷೇಧದ ನಡುವೆಯೂ ಜಲ್ಲಿಕಟ್ಟು

ತಿರುಚಿನಾಪಳ್ಳಿ: ಸುಪ್ರೀಂಕೋರ್ಟ್‌ನ ನಿಷೇಧವನ್ನು ಧಿಕ್ಕರಿಸಿ, ಅಂಬಿಲ್ ಎಂಬ ಗ್ರಾಮದಲ್ಲಿ ಶನಿವಾರ ಬೃಹತ್ ಜಲ್ಲಿಕಟ್ಟು ಆಯೋಜಿಸಲಾಗಿತ್ತು. ಇದರಲ್ಲಿ 65 ಹೋರಿಗಳು ಹಾಗೂ 40 ಮಂದಿ ಪಳಗಿಸುವವರು ಭಾಗವಹಿಸಿದ್ದಾರೆ. ಪೊಲೀಸ್ ಠಾಣೆಗೆ ಕೇವಲ 10 ಕಿಲೋಮೀಟರ್ ದೂರದ ಹಳ್ಳಿಯಲ್ಲೇ ಇದು ನಡೆದರೂ ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.
ಗ್ರಾಮದ ಮಾರಿಯಮ್ಮನ ಥಿಡಾಲ್ ಚೌಕದಲ್ಲಿ ಗುಂಪು ಸೇರಿದ ನೂರಾರು ಮಂದಿ ಅಭಿಮಾನಿಗಳು ಹೋರಿ ಹಿಡಿಯುವ ಈ ಸ್ಪರ್ಧೆಯನ್ನು ವೀಕ್ಷಿಸಿ ಸಂಭ್ರಮಿಸಿದರು. ಗ್ರಾಮದಲ್ಲಿ ಮೂರು ದಶಕಗಳಿಂದ ಇದನ್ನು ವ್ಯವಸ್ಥೆಗೊಳಿಸಲಾಗುತ್ತಿದ್ದು, ಮುಂಜಾನೆಯಿಂದ ಮಧ್ಯಾಹ್ನ ವರೆಗೆ ಸ್ಪರ್ಧೆ ನಡೆಯಿತು ಎಂದು ಇದರ ವಿಡಿಯೊ ತುಣುಕುಗಳನ್ನು ಗ್ರಾಮಸ್ಥರು ಮಾಧ್ಯಮಗಳಿಗೆ ತಲುಪಿಸಿದರು. ಕೆಲ ದಿನಗಳ ಹಿಂದೆಯೇ ಈ ಸ್ಪರ್ಧೆಗಾಗಿ ಸುತ್ತಮುತ್ತಲ ಗ್ರಾಮಗಳಿಂದ ಬಲಿಷ್ಠ ಹೋರಿಗಳನ್ನು ತರಲಾಗಿತ್ತು ಎಂದು ಗ್ರಾಮಸ್ಥರು ವಿವರಿಸಿದ್ದಾರೆ.
ಆಂಧ್ರಪ್ರದೇಶದ ಹಲವು ಗ್ರಾಮಗಳಲ್ಲೂ ಸ್ಪರ್ಧೆ ವ್ಯಾಪಕವಾಗಿ ನಡೆಯಿತು. ಜಲ್ಲಿಕಟ್ಟು ಹಾಗೂ ಎತ್ತಿನ ಬಂಡಿ ಸ್ಪರ್ಧೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ್ದರೂ, ಇದನ್ನು ವ್ಯವಸ್ಥೆಗೊಳಿಸಲು ಅನುಮತಿ ನೀಡುವ ಅಧಿಸೂಚನೆಯನ್ನು ಕೇಂದ್ರ ಪರಿಸರ ಸಚಿವಾಲಯ ಇತ್ತೀಚೆಗೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸ್ವತಃ ಕೇಂದ್ರ ಸರ್ಕಾರದ ಪ್ರಾಣಿ ಸಂರಕ್ಷಣಾ ಮಂಡಳಿ ಸೇರಿದಂತೆ ಹಲವು ಸ್ವಯಂಸೇವಾ ಸಂಸ್ಥೆಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಸುಪ್ರೀಂಕೋರ್ಟ್ ಮತ್ತೆ ಇದಕ್ಕೆ ನಿಷೇಧ ಹೇರಿತ್ತು.





