ಬಿಜೆಪಿ ಸಖ್ಯ: ನಿರ್ಧಾರಕ್ಕೆ ಇಂದು ಪಿಡಿಪಿ ಮಹತ್ವದ ಸಭೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಒಂಬತ್ತು ದಿನಗಳ ಆಡಳಿತ ಶೂನ್ಯ ವ್ಯವಸ್ಥೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಪಿಡಿಪಿ ಹೆಜ್ಜೆ ಇಟ್ಟಿದ್ದು, ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಸುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲು ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ಭಾನುವಾರ ಪಕ್ಷದ ಸಭೆ ಕರೆದಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮಹ್ಮದ್ ಸಯೀದ್ ಜನವರಿ ಏಳರಂದು ಹಠಾತ್ ನಿಧನರಾದ ಬಳಿಕ ನಡೆಯುತ್ತಿರುವ ಪಕ್ಷದ ಪ್ರಥಮ ಅಧಿಕೃತ ಸಭೆ ಇದಾಗಿದೆ. ಮೈತ್ರಿ ಮುಂದುವರಿಸಲು ಬಿಜೆಪಿ ಷರತ್ತುಗಳನ್ನು ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಈ ಸಭೆ ವಿಶೇಷ ಮಹತ್ವ ಪಡೆದಿದೆ.
ಮುಫ್ತಿ ನಿವಾಸದಲ್ಲಿ ನಡೆಯುವ ಸಭೆಗೆ ಪಕ್ಷದ ಎಲ್ಲ ಸಂಸದರು, ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ಅಥವಾ ಪಿಡಿಪಿ ಇದುವರೆಗೂ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದನೆ ಮಂಡಿಸದ ಹಿನ್ನೆಲೆಯಲ್ಲಿ ಜನವರಿ 9ರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿದ್ದ ಮೈತ್ರಿ ಸರ್ಕಾರ ಮುಂದುವರಿಸಲು ಬಿಜೆಪಿ ಷರತ್ತುಗಳನ್ನು ವಿಧಿಸಿರುವ ಬಗ್ಗೆ ಮೆಹಬೂಬಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮುಫ್ತಿ ನಿಧನದ ವೇಳೆ ಬಿಜೆಪಿ ಮುಖಂಡರು ಸರಿಯಾಗಿ ಶ್ರದ್ಧಾಂಜಲಿ ಸಲ್ಲಿಸಿಲ್ಲ ಎಂಬ ವಿಷಯದಿಂದ ಹಿಡಿದು, ಜಮ್ಮು ಕಾಶ್ಮೀರಕ್ಕೆ ಹರಿದು ಬರುತ್ತಿರುವ ಕೇಂದ್ರ ನೆರವು ಅತ್ಯಲ್ಪ ಎಂಬ ವಿಚಾರಗಳವರೆಗೆ ಹಲವು ವಿಷಯಗಳಲ್ಲಿ ಮೆಹಬೂಬಾ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. 87 ಸದಸ್ಯಬಲದ ವಿಧಾನಸಭೆಯಲ್ಲಿ ಪಿಡಿಪಿ 27 ಹಾಗೂ ಬಿಜೆಪಿಯ 25 ಮಂದಿ ಶಾಸಕರಿದ್ದಾರೆ.





